ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗಲಿದ ಹಿರಿಯ ಬರಹಗಾರರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯು ದಿನಾಂಕ 27-03-2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ನುಡಿನಮನವನ್ನು ಸಲ್ಲಿಸಿದ ನಾಡೋಜ ಡಾ.ಮಹೇಶ ಜೋಶಿ “ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯದ ಸೀಮೆಯನ್ನು ಗಮನಾರ್ಹವಾಗಿ ವಿಸ್ತರಿಸದವರು. ಮಧುರ ಚೆನ್ನ ಮತ್ತು ಅರವಿಂದರ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದ ಅವರು ಅಧ್ಯಾತ್ಮದ ಹಿರಿಮೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದರು. ಹದಿನೆಂಟನೆಯ ವಯಸ್ಸಿನಲ್ಲಿ ತಮ್ಮೂರಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗುರುಲಿಂಗ ಕಾಪಸೆಯವರು ಸ್ವ-ಅಧ್ಯಯನದಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಅವರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರು ದೊಡ್ಡ ಪ್ರಮಾಣದ ಸಾಧನೆ ಮಾಡಲು ಕಾರಣರಾದರು. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿದ್ದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದ ಕಾಪಸೆಯವರು ಸಂಪಾದಿಸಿದ ಮಧುರ ಚೆನ್ನರ ಕೃತಿಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದನ್ನು ವಿಶ್ಲೇಷಿಸಿ ಕನ್ನಡ ಅಧ್ಯಾತ್ಮಿಕ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಎರಡಕ್ಕೂ ಅವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ವಿಜಯಪುರದ ಹಲಸಂಗಿ ಗೆಳಯರ ಗುಂಪಿನ ಕುರಿತು ಅಧಿಕೃತವಾಗಿ ಮಾತನಾಡುತ್ತಿದ್ದ ಗುರುಲಿಂಗ ಕಾಪಸೆಯವರು ಈ ಕುರಿತು ರಚಿಸಿರುವ ಕೃತಿ, ಮಹತ್ವದ ಸಾಂಸ್ಕೃತಿಕ ದಾಖಲೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಅರವಿಂದರ ಪ್ರಭಾವ ಅಪಾರವಾಗಿದ್ದು, ಅದರ ನೆಲೆಗಳನ್ನು ಕಾಪಸೆಯವರು ನಿಖರವಾಗಿ ಗುರುತಿಸಿದ್ದರು. ಬೇಂದ್ರೆಯವರ ಒಡನಾಡಿಯಾಗಿದ್ದ ಅವರು ರಚಿಸಿದ ‘ಬೇಂದ್ರೆ ಮತ್ತು ಮಧುರ ಚೆನ್ನರ ಸಖ್ಯ ಯೋಗ’ ಕನ್ನಡ ಸಾಹಿತ್ಯದ ಪ್ರಮುಖ ಕೃತಿಯಾಗಿದೆ. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆಯನ್ನು ಸಲ್ಲಿಸಿದ್ದ ಗುರುಲಿಂಗ ಕಾಪಸೆಯವರು ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ವಿವಿಧ ಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು” ಎಂದು ನಾಡೋಜ ಡಾ.ಮಹೇಶ ಜೋಶಿಯವರು ಗುರುಲಿಂಗ ಕಾಪಸೆಯವರ ಕನ್ನಡ ಸಾಹಿತ್ಯ ಪರಿಷತ್ತಿನ ಅನುಬಂಧವನ್ನು ನೆನಪು ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು “ಗುರುಲಿಂಗ ಕಾಪಸೆಯವರು
ಜಾನಪದ, ಅನುವಾದ, ಸಂಪಾದನೆ ಮತ್ತಿತರ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಬಹುಕಾಲ ನಿಲ್ಲುವಂತಹದು, ಚನ್ನವೀರ ಕಣವಿಯವರ ‘ಚೆಂಬೆಳುಕು’ ಎಂಬ ಅಭಿನಂದನಾ ಗ್ರಂಥವನ್ನು ಸಂಪಾದಿಸಿರುವ ಕ್ರಮ ಮಾದರಿಯಾಗಿದೆ. ಅವರು ಸಂಪಾದಿಸಿದ ಮಧುರ ಚೆನ್ನರ ಸಂಪುಟ ನಮಗೆಲ್ಲಾ ಮಧುರ ಚೆನ್ನರ ಕಾವ್ಯದ ವಿಸ್ತಾರವನ್ನು ತಿಳಿಸಿಕೊಟ್ಟಿತು. ‘ಬೇಂದ್ರೆ-ಮಧುರ ಚೆನ್ನ ಸಖ್ಯಯೋಗ’ ಕೃತಿ ಕೂಡ ಬಹಳ ಮಹತ್ವದ್ದು. ಗಹನವಾದ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ಬರೆದಿರುವುದು ಅವರ ಇನ್ನೊಂದು ಮಹತ್ವದ ಕೊಡುಗೆಯಾಗಿದೆ”. ಹಲಸಂಗಿ ಗೆಳೆಯರ ಗುಂಪಿನ ಕುರಿತು ‘ಮಲ್ಲಿಗೆ ಮಾಸ ಪತ್ರಿಕೆಗೆ ಅವರು ಬರೆದಿದ್ದ ಮಹತ್ವದ ಲೇಖನವನ್ನು ನೆನಪು ಮಾಡಿಕೊಂಡ ಅವರು ಕಾಪಸೆಯವರ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಗುರುಲಿಂಗ ಕಾಪಸೆಯವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.