ಬೆಂಗಳೂರು : ‘ನುಡಿ ತೋರಣ’ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ ದಿನಾಂಕ 29-06-2025ರ ಭಾನುವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಗ್ಗೆ ಘಂಟೆ 9.30 ರಿಂದ ಸಂಜೆ ಘಂಟೆ 5.00ರ ವರೆಗೆ ನಡೆಯಲಿದೆ.
ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯದ ಸಮಕಾಲೀನ ಚಿಂತಕರು, ಬರಹಗಾರರು, ವಿಮರ್ಶಕರಾದ ಶ್ರೀ ಜಿ. ಬಿ. ಹರೀಶ್ ರೊಡನೆ ‘ಬರಹಗಾರ ಮತ್ತು ಓದುಗನ ನಡುವಿನ ಅನುಸಂಧಾನ’ ಕುರಿತು ಸಂವಾದ ಏರ್ಪಡಿಸಲಾಗಿದೆ. ವೇದಿಕೆಯು ಪ್ರತಿವರ್ಷ ಕೊಡಮಾಡುವ ‘ನುಡಿ ಭೂಷಣ’ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಖ್ಯಾತ ಸಾಹಿತಿ ತ. ನಾ. ಶಿವಕುಮಾರ್ (ತನಾಶಿ), ಕಲುಬುರ್ಗಿಯ ಖ್ಯಾತ ನೇತ್ರತಜ್ಞ ಡಾ. ಉದಯ ಪಾಟೀಲ ಹಾಗು ಬೆಂಗಳೂರಿನ ಖ್ಯಾತ ಸಾಹಿತಿ ಅನುಸೂಯ ಸಿದ್ಧರಾಮ ಇವರಿಗೆ ಪ್ರದಾನ ಮಾಡಲಾಗುವುದು. ಅಲ್ಲದೆ ಬಳಗದ ಸದಸ್ಯರಿಂದ ‘ಜಾನಪದ ಸಾಂಸ್ಕೃತಿಕ ವೈಭವ’, ‘ಆಶು ಕವಿಗೋಷ್ಠಿ’ ಇನ್ನಿತರ ಕಾರ್ಯಕ್ರಮಗಳನ್ನು ಸಮಾವೇಶದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.