ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ವತಿಯಿಂದ ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 29-03-2024ರಂದು ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು.
ನಮ್ಮ ನಡುವೆ ಸದಾ ಸ್ನೇಹ ಪೂರ್ಣ ಚಟುವಟಿಕೆಗಳಿಂದ ಮಾದರಿ ಮಾರ್ಗದರ್ಶಕರಾಗಿದ್ದು ಜನ ಮನ್ನಣೆಗಳಿಸಿ ಇತ್ತೀಚೆಗೆ ದಿವಂಗತರಾದ ಮಾಧ್ಯಮ ತಜ್ಞ ಮನೋಹರ ಪ್ರಸಾದ್, ಚಲನಚಿತ್ರ ಹಾಗೂ ರಂಗನಟ ವಿ.ಜಿ. ಪಾಲ್, ಗಾಯಕ, ಪ್ರಸಾದನಕಾರ ಎಸ್. ರಾಮದಾಸ್, ಸಂಗೀತ ಕ್ಷೇತ್ರದ ಗಿಟಾರಿಸ್ಟ್ ನವೀನ್ ಚಂದ್ರ ಎಂ. ಅವರಿಗೆ ತೋನ್ಸೆ ಅವರು ನುಡಿನಮನ ಸಲ್ಲಿಸಿ, ಒಕ್ಕೂಟದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹರಿದಾಸರಾದ ತೋನ್ಸೆ ಪುಷ್ಕಳ ಕುಮಾರ್ “ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರನ್ನು ಸ್ಮರಿಸುವುದು ಸಾಂಸ್ಕೃತಿಕ ಸಂಘಟನೆಗಳ ಆದ್ಯ ಕರ್ತವ್ಯ.” ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮುಂದಿನ ಏಪ್ರಿಲ್, ಮೇ ಹಾಗೂ ಜೂನ್ ಮೂರು ತಿಂಗಳ ಒಕ್ಕೂಟದ ಕಾರ್ಯಕ್ರಮಗಳ ಮುನ್ನೋಟ ನೀಡಿದರು. ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ ಅವರು ಸ್ವಾಗತಿಸಿ, ಅನಾರೋಗ್ಯದಲ್ಲಿದ್ದ ಸದಸ್ಯ ಕಲಾವಿದರಿಗೆ ಸಹಾಯ ವಿತರಿಸಿದ ವಿವರ ಸಲ್ಲಿಸಿ ಮಂಜೂರಾತಿ ಪಡೆದರು. ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಮುರಳಿಧರ ಕಾಮತ್, ಮಲ್ಲಿಕಾ ಶೆಟ್ಟಿ, ರಮೇಶ್ ಸಾಲ್ಯಾನ್, ಮೋಹನ್ ಪ್ರಸಾದ್ ನಂತೂರ್, ಹುಸೇನ್ ಕಾಟಿಪಳ್ಳ, ಸತೀಶ್, ಧನುರಾಜ್, ದಿನಕರ ಕಾವೂರು , ಸಂತೋಷ್ ಅಂಚನ್, ರವಿ, ರಾಮ್ ಕುಮಾರ್, ಹರೀಶ್ ದೇವಾಡಿಗ, ಜ್ಯೋತಿ ಬಿ. ಕೆ., ಶ್ರೀ ವಿದ್ಯಾ, ಸುಶ್ಮಿತಾ, ಧನ್ಯ ಶ್ರೀ, ಸುಮಾ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಚೈತ್ರಾ ಸುವರ್ಣ ವಂದಿಸಿದರು.