ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನರಾದ ಪಾತಾಳ ವೆಂಕಟರಮಣ ಭಟ್ಟ ಹಾಗೂ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ದಿವಂಗತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷ ಶಾಂತಲೆಯಾಗಿ ಯಕ್ಷಗಾನ ರಂಗಸ್ಥಳದಲ್ಲಿ ಮೆರೆದ ಪಾತಾಳರು ಉಭಯ ತಿಟ್ಟುಗಳಲ್ಲೂ ಪಾರಮ್ಯವನ್ನು ಮೆರೆದು ಸ್ತ್ರೀ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದ ಅಪ್ರತಿಮ ಕಲಾವಿದರು, ಅದೇ ತೆರನಾಗಿ ಪರಂಪರೆಯ ದೈತ್ಯ ವೇಷಗಳಿಗೆ ಜೀವ ತುಂಬಿದ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಓರ್ವ ಅಪರೂಪದ ಕಲಾವಿದ” ಎಂದು ನುಡಿದರು.
ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪಾತಾಳ ವೆಂಕಟರಮಣ ಭಟ್ಟರನ್ನು ಸ್ಮರಿಸುತ್ತಾ “ಬೇಲೂರು ಶಿಲಾಬಾಲಿಕೆಯರ ಭಂಗಿಗಳನ್ನು ಅಭ್ಯಸಿಸಿ ರಂಗಸ್ಥಳದಲ್ಲಿ ಯಕ್ಷಗಾನ ಕಲೆಗೆ ಅನುಸಾರವಾಗಿ ಬಳಸಿಕೊಂಡ ಹಿರಿಮೆ ಪಾತಾಳರದ್ದು, ತನ್ನ ವೃತ್ತಿಜೀವನದ ಗಳಿಕೆಯ ಬಹುಪಾಲನ್ನು ಯಕ್ಷಗಾನ ಕಲಾವಿದರಿಗೆ ಸಮರ್ಪಿಸಿದ ಉದಾರ ಹೃದಯವಂತ ಎಂದರು, ಇನ್ನೋರ್ವ ಕಲಾವಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಪಾರಂಪರಿಕ ಯಕ್ಷಗಾನ ಬಣ್ಣಗಾರಿಕೆಯ ಮೂಲಕ ನಿಜಾರ್ಥದ ದೈತ್ಯನಂತೆ ರಂಗಸ್ಥಳದಲ್ಲಿ ಮೆರೆದವರು” ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಪ್ರಮುಖರಾದ ಪೊಳಲಿ ನಿತ್ಯಾನಂದ ಕಾರಂತ, ಡಾ. ಹರಿಕೃಷ್ಣ ಪುನರೂರು, ಜಿ.ಕೆ. ಭಟ್ ಸೇರಾಜೆ, ಶಿವಾನಂದ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಕೆ. ತಾರಾನಾಥ ಹೊಳ್ಳ, ಕೆ. ಶ್ರೀಕರ ಭಟ್, ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಪೂರ್ಣಿಮಾ ರಾವ್ ಪೇಜಾವರ, ಸುಮ ಪ್ರಸಾದ್, ಜನಾರ್ದನ ಹಂದೆ, ಪ್ರಭಾಕರ ರಾವ್ ಪೇಜಾವರ, ಮಧುಸೂದನ ಅಲೆವೂರಾಯ, ಲಲಿತಾ ಆರ್. ಉಪಾಧ್ಯಾಯ, ಸುಧಾಕರ ರಾವ್ ಪೇಜಾವರ, ಪಿ. ಬಿ. ಹರೀಶ್ ರೈ, ಎಂ. ಸುಂದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು