ಮಂಗಳೂರು : ತುಳು ಪರಿಷತ್ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ ಕೆ.ಟಿ.ಗಟ್ಟಿಯವರಿಗೆ ದಿನಾಂಕ 24-02-2024ರಂದು ಮ್ಯಾಪ್ಸ್ ಕಾಲೇಜಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ಮಾತನಾಡಿ “ಕೆ.ಟಿ.ಗಟ್ಟಿ ಅವರ ಕಾದಂಬರಿಗಳ ಪಾತ್ರಗಳಲ್ಲಿ ಓದುಗರು ತಮ್ಮ ಬಿಂಬವನ್ನೇ ಕಾಣುತ್ತಿದ್ದರು. ಒಂದು ಕಾಲ ಘಟ್ಟದಲ್ಲಿ ಶಿವರಾಮ ಕಾರಂತ ಹಾಗೂ ಎಸ್.ಎಲ್. ಭೈರಪ್ಪ ಅವರಿಗಿಂತಲೂ ದೊಡ್ಡ ಓದುಗ ವರ್ಗವನ್ನು ಹೊಂದಿದ್ದ ಕಾದಂಬರಿಕಾರ ಕೆ.ಟಿ. ಗಟ್ಟಿ ಆಗಿದ್ದರು. ತಮ್ಮ ಕಾದಂಬರಿಗಳಲ್ಲಿ ಬಡತನ, ನೋವು, ಸಂಕಟ ಹಾಗೂ ಬದುಕಿನ ಸಂಬಂಧಗಳ ಚಿತ್ರಣದೊಂದಿಗೆ ಅವರು ಕಟ್ಟಿಕೊಟ್ಟ ಭಾವ ಪ್ರಪಂಚ ಜನರನ್ನು ಆಕರ್ಷಸಿತ್ತು” ಎಂದು ಅಭಿಪ್ರಾಯಪಟ್ಟರು.
ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮಾತನಾಡಿ, “ಗಟ್ಟಿ ಅವರ ಬದುಕು ಬಾಲ್ಯದ ಕಹಿ ಘಟನೆಗಳು, ಜಾತಿಯ ಕಾರಣಕ್ಕೆ ಎದುರಿಸಿದ ಅವಮಾನಗಳಿಂದ ಮಾಗಿತ್ತು. ಹಾಗಾಗಿಯೇ ಅವರ ಬರಹಗಳಲ್ಲಿ ಬಡ ಮಧ್ಯಮ ವರ್ಗದ ಜನರ ಬವಣೆ, ಹೆಣ್ಣಿನ ಶೋಷಣೆಗಳನ್ನು ಬಿಂಬಿಸಿದ್ದಾರೆ. ವೈಚಾರಿಕತೆಯ ಮಹತ್ವವನ್ನು ಸಾರಿದ್ದಾರೆ” ಎಂದು ಹೇಳಿದರು.
ಕೆ.ಟಿ.ಗಟ್ಟಿ ಅವರ ಪುತ್ರ ಸತ್ಯಜಿತ್ ಮಾತನಾಡಿ “ಅಪ್ಪನ ಅಗಾಧ ಪ್ರಭಾವ ನನ್ನ ಮೇಲೂ ಆಗಿದೆ. ಅಪ್ಪ ಕೈ ತುಂಬ ಸಂಬಳ ಬರುತ್ತಿದ್ದ ನೌಕರಿಯನ್ನು ತೊರೆದು ಸಾಹಿತ್ಯ ಬರೆದೇ ಬದುಕುತ್ತೇನೆ ಎಂಬುದನ್ನು ಆಯ್ಕೆ ಮಾಡಲು ಅವರಿಗೆ ಹೇಗೆ ಧೈರ್ಯ ಬಂತು ಹಾಗೂ ಹೇಗೆ ಅಷ್ಟು ನಿರಾಳರಾಗಿ ಬರೆದರು ಎಂಬ ಪ್ರಶ್ನೆ ಈಗಲೂ ಕಾಡುತ್ತದೆ” ಎಂದರು.
ಉಪನ್ಯಾಸಕ ಚೇತನ್ ಸೋಮೇಶ್ವರ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗ್ಡೆ, ಪತ್ರಕರ್ತ ನಂದಗೋಪಾಲ್, ಲೇಖಕಿಯರಾದ ಉಷಾ ಪಿ. ರೈ, ಡಾ. ಮೀನಾಕ್ಷಿ ರಾಮಚಂದ್ರ, ಮೀನಾಕ್ಷಿ ಕಳವಾರು, ಉಪನ್ಯಾಸಕ ಡಾ. ಮಾಧವ ಎಂ.ಕೆ. ಮೊದಲಾದವರು ನುಡಿ ನಮನ ಸಲ್ಲಿಸಿದರು.
ಕೆ.ಟಿ.ಗಟ್ಟಿ ಅವರ ಪತ್ನಿ ಯಶೋದಾ, ಪುತ್ರಿಯರಾದ ಚಿತ್ ಪ್ರಭಾ, ಪ್ರಿಯದರ್ಶಿನಿ ಪಾಲ್ಗೊಂಡಿದ್ದರು. ಡಾ. ಪ್ರಭಾಕರ ನೀರುಮಾರ್ಗ, ಬೆನೆಟ್ ಅಮ್ಮನ್ನ, ಸದಾಶಿವ ಮಾಸ್ಟರ್, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ, ಶಾಲೆಟ್ ಪಿಂಟೋ, ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಮಹ್ಮದ್ ಹನೀಫ್, ವೆಂಕಟೇಶ್ ಬಾಳಿಗ, ಶುಭೋದಯ ಆಳ್ವ ಮೊದಲಾದವರು ಭಾಗವಹಿಸಿದ್ದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

