ಕುಂದಾಪುರ : ಕುಂದಾಪುರದ ‘ಶಬ್ದಗುಣ’ ಸಭಾಂಗಣದಲ್ಲಿ ದಿನಾಂಕ 16-07-2023ರಂದು ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳಾದ ‘ಊರು ಮನೆ ಉಪ್ಪು ಕಡಲು’ ಮತ್ತು ‘ಬೆಳದಿಂಗಳ ಮರ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂತೋಷ್ ನಾಯಕ್ ಪಟ್ಲ ಅವರು ಮಾತನಾಡುತ್ತಾ “ನಾನು ಗೌರವಿಸುವ ಕವಿ ವಸಂತ ಬನ್ನಾಡಿಯವರ ಎರಡು ಕವನ ಸಂಕಲನಗಳ ಬಿಡುಗಡೆಯಲ್ಲಿ ಭಾಗಿಯಾದ ಸಂತಸವಿಂದು. ಕವಿಯೊಬ್ಬ ತನ್ನ ಕಾಲದ ಕವಿಯಾಗುವುದು ಹೀಗೇನೇ ಏನೋ….. ಹಾಗಾಗಿಯೇ ಬನ್ನಾಡಿ ನಮ್ಮ ಕಾಲದ ಕವಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಹೇರ್ಳೆ ಅವರು ‘ಬೆಳದಿಂಗಳ ಮರ’ ಸಂಕಲನದ ‘ಮಗುಚುವ ಕಡಲು’ ಹಾಗೂ ಸಂತೋಷ್ ನಾಯಕ್ ಪಟ್ಲ ಅವರು ‘ಊರು ಮನೆ ಉಪ್ಪು ಕಡಲು’ ಸಂಕಲನದ ‘ಬದಲಾದ ಕಾಲದಲ್ಲಿ’ ಕವನ ವಾಚಿಸಿದರು. ಈ ಕಾರ್ಯಕ್ರಮದಲ್ಲಿ ಉದಯ ಗಾಂವ್ಕರ್, ಸದಾನಂದ ಬೈಂದೂರು, ವಾಸುದೇವ ಗಂಗೇರ, ದಿನೇಶ ಹೆಗ್ಡೆ, ಶಶಿಧರ ಹೆಮ್ಮಾಡಿ ಮತ್ತು ತಿಮ್ಮಪ್ಪ ಗುಲ್ವಾಡಿಯವರು ಉಪಸ್ಥಿತರಿದ್ದರು.
ಕವಿಯ ಬಗ್ಗೆ :
ಉಡುಪಿ ಜಿಲ್ಲೆಯ ಕೋಟದಿಂದ ಮೂರು ಕಿ.ಮೀ. ದೂರದ ಬನ್ನಾಡಿಯಲ್ಲಿ ಇವರು ಜನಿಸಿದರು. ತಮ್ಮ ವಿದ್ಯಾಭಾಸದ ನಂತರ 1978ರಿಂದ ಕುಂದಾಪುರದ ಭಂಡಾರ್ಕಾರ್ಸ್ಮ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಯನ್ನು ಕೈಗೊಂಡರು. ‘ಗಿಳಿಯು ಪಂಜರದೊಳಿಲ್ಲ’, ‘ಪೋಲೀಸರಿದ್ದಾರೆ ಎಚ್ಚರಿಕೆ’, ‘ಮಾರೀಚನ ಬಂಧುಗಳು’ ಇವು ಭಂಡಾರ್ಕಾರ್ಸ್ ಕಾಲೇಜಿನ ಅಸಂಗತ ನಾಟಕ ವೇದಿಕೆಗಾಗಿ ಇವರ ನಿರ್ದೇಶನದಲ್ಲಿ ನಡೆದ ನಾಟಕಗಳು.
1980ರಲ್ಲಿ ತಮ್ಮ ಸ್ವಂತ ನಾಟಕ ಸಂಸ್ಥೆ ‘ಜನರಂಗ’ ಸ್ಥಾಪಿಸಿದ ನಂತರ ‘ಕತ್ತಲೆ ದಾರಿ ದೂರ’, ‘ಕುರಿ’, ‘ಚಾಕ್ ಸರ್ಕಲ್’ ಇವರು ನಿರ್ದೇಶಿಸಿದ ಮುಖ್ಯ ನಾಟಕಗಳು. ಸಮುದಾಯ ತಂಡಕ್ಕಾಗಿ ‘ತಾಯಿ’ ನಾಟಕವನ್ನು ನಿರ್ದೇಶಿಸಿದ್ದಾರೆ. ಮುಂದೆ 1987ರಲ್ಲಿ ಸ್ನೇಹಿತರೊಂದಿಗೆ ‘ಬಹುರೂಪಿ ಸಾಂಸ್ಕೃತಿಕ ಟ್ರಸ್ಟ್’ ಸ್ಥಾಪಿಸಿ, ‘ಜನಶತ್ರು’ ನಾಟಕ ನಿರ್ದೇಶನ ಮಾಡಿ ಮತ್ತು ಬಹುರೂಪಿ ಪತ್ರಿಕೆ ಪ್ರಕಟನೆಯ ಕಾರ್ಯವನ್ನು ಕೈಗೆತ್ತಿಕೊಂಡರು.
ಭಂಡಾರ್ಕಾರ್ಸ್ ಕಾಲೇಜಿನ ಟ್ರಸ್ಟಿನ ವತಿಯಿಂದ ಆರಂಭಗೊಂಡ ನಾಟಕ ಶಾಲೆ ರಂಗ ಅಧ್ಯಯನ ಕೇಂದ್ರದ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದ ಮೇಲೆ ಕೇಂದ್ರಕ್ಕೆ ಆಡಿಸಿರುವ ಮುಖ್ಯ ನಾಟಕಗಳು ‘ಚೆರಿತೋಟ’, ‘ಎಲ್ಲರೂ ನನ್ನ ಮಕ್ಕಳೇ’, ‘ಯಯಾತಿ’, ‘ಸಂಕ್ರಾಂತಿ’, ‘ತಲೆದಂಡ’ ಹಾಗೂ ‘ಅಗ್ನಿಲೋಕ’. ಹೀಗೆ ಈವರೆಗೆ 40ಕ್ಕೂ ಮಿಕ್ಕಿ ನಾಟಕ ನಿರ್ದೇಶನ ಮಾಡಿದ ಖ್ಯಾತಿ ಇವರದ್ದು.
1991ರಲ್ಲಿ ಆರಂಭಗೊಂಡ ‘ಅರಿವು’ ಎಂಬ ಸಮಾಜ ವಿಜ್ಞಾನ ಪತ್ರಿಕೆಯ ಬರವಣಿಗೆಯ ಸಂಪಾದಕರಲ್ಲಿ ಇವರೂ ಒಬ್ಬರಾಗಿದ್ದರು. ಕಡಲ ಧ್ಯಾನ, ನೀಲಿ ಹೂ, ನಿಜದ ನೆಲೆ, ಮೀನಿನ ಹೊಳಪನ್ನು ನೀರಿಗೇ ಬಿಟ್ಟು ಮತ್ತು ಇಗೋ ಅರಿವೆ ಇವು ಈವರೆಗೆ ಪ್ರಕಟವಾದ ಇವರ ಕವನ ಸಂಕಲನಗಳು.
ಬಿ.ಎಂ.ಶ್ರೀ. ಪ್ರಶಸ್ತಿ, ಪು.ತಿ.ನ. ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಈ ಎಲ್ಲಾ ಪ್ರಶಸ್ತಿಗಳೊಂದಿಗೆ ಕುರಿ, ಸಂಕ್ರಾಂತಿ, ಕತ್ತಲೆ ದಾರಿ ದೂರ ಮತ್ತು ತಲೆದಂಡ ನಾಟಕಗಳಿಗಾಗಿ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ದೊರೆತದ್ದು ನಾಟಕ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಸಂದ ಗೌರವ.