ಉಡುಪಿ : ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್, ಸೈ ಆರ್ಟ್ ಸರ್ವಿಸಸ್ ಅಮೇರಿಕ, ಮಣಿ ಕೃಷ್ಣಸ್ವಾಮಿ ಅಕಾಡೆಮಿ, ರಾಗಧನ ಉಡುಪಿ, ಸರಿಗಮ ಭಾರತಿ ಸಂಗೀತ ಶಾಲೆ ಪರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಾದ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವನ್ನು ದಿನಾಂಕ 04 ಜನವರಿ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಿದೆ.
ಅಪರಾಹ್ನ ಗಂಟೆ 1-00ರಿಂದ ರಾತ್ರಿ 8-00ಗಂಟೆಯವೆರೆಗೆ ಊತ್ತುಕ್ಕಾಡು ವೆಂಕಟಕವಿ ಆರಾಧನೋತ್ಸವವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುವುದು ಎಂದು ರಂಜನಿ ಮೆಮೋರಿಯಲ್ ಟ್ರಸ್ಟಿನ ಅಧ್ಯಕ್ಷ ಪ್ರೊ. ವಿ .ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ. ಊತ್ತುಕ್ಕಾಡು ವೆಂಕಟಕವಿ ಇವರ ಕೃತಿಗಳನ್ನು ಜನಪ್ರಿಯಗೊಳಿಸುವ ಯೋಜನೆಯನ್ನು ಅವಿರತವಾಗಿ ನಾಡಿನ ವಿವಿದೆಡೆ ಆಯೋಜಿಸಿಕೊಂಡು ಬರುತ್ತಿರುವ ಸಂಗೀತ ಸಾಮ್ರಾಟ್ ಚಿತ್ರವೀಣಾ ಎನ್. ರವಿಕಿರಣ್ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 21 ಯುವ ಕಲಾವಿದರು ಮತ್ತು ಅಮೇರಿಕಾದಲ್ಲಿ ನೆಲೆಸಿರುವ 8 ಮಂದಿ ಯುವ ಕಲಾವಿದರು ಉತ್ತುಕ್ಕಾಡು ವೆಂಕಟಕವಿ ಇವರ ಕೃತಿಗಳನ್ನು ಪ್ರಸ್ತುತ ಪಡಿಸುವರು.
ಸಂಜೆ ಗಂಟೆ 4-30ರಿಂದ ಊತ್ತುಕ್ಕಾಡು ಇವರ ಸುಪ್ರಸಿದ್ಧ ಸಪ್ತರತ್ನ ಕೃತಿಗಳ ಗೋಷ್ಠಿ ಗಾಯನಕ್ಕೆ ಸಂಜಯ್ ಸುರೇಶ್ ಮತ್ತು ಮಹಾತೀ ಕೆ. ಇವರು ವಯೋಲಿನ್, ತುಮಕೂರು ಬಿ. ರವಿಶಂಕರ್ ಮತ್ತು ಪ್ರಣವ್ ಕೃಷ್ಣ ರಾಮಸುಬ್ರಮಣ್ಯನ್ ಇವರು ಮೃದಂಗಂನಲ್ಲಿ ಸಹಕರಿಸಲಿದ್ದಾರೆ. ಬಳಿಕ ನಡೆಯಲಿರುವ ಸರಳ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರವೀಣಾ ಕಲಾವಿದ ಎನ್. ರವಿಕಿರಣ್ ಇವರನ್ನು ಗೌರವಿಸಲಾಗುವುದು. ಕೊನೆಯಲ್ಲಿ ಪ್ರಸ್ತುತಗೊಳ್ಳುವ ಚಿತ್ರವೀಣಾ ಎನ್. ರವಿಕಿರಣ್ ಇವರ ಸಂಗೀತ ಕಾರ್ಯಕ್ರಮದಲ್ಲಿ ಮೃದಂಗದಲ್ಲಿ ತುಮಕೂರು ಬಿ. ರವಿಶಂಕರ್ ಹಾಗೂ ವಯಲಿನ್‌ನಲ್ಲಿ ಸಂಜಯ್ ಸುರೇಶ್ ಸಾಥ್ ನೀಡಲಿದ್ದಾರೆ.

