ಪುತ್ತೂರು : ಪದವರ್ಣವೆಂಬುದು ಭರತನಾಟ್ಯದಲ್ಲಿ ಪ್ರಮುಖವಾದ ನೃತ್ಯಬಂಧವಾಗಿದೆ. ಸುಮಾರು 25-30 ನಿಮಿಷ ಅಥವಾ ಕೆಲವೊಮ್ಮೆ ಮುಕ್ಕಾಲು ಗಂಟೆಯವರೆಗೆ ವಿಸ್ತರಿಸುವ ಈ ನೃತ್ಯವು ಇತ್ತೀಚಿಗಿನ ದಿನಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳಿಂದ ಮರೆಯಾಗುತ್ತಿವೆ. ಸುದೀರ್ಘವಾದ ಪ್ರಸ್ತುತಿ, ಘನ ಸಾಹಿತ್ಯ, ಅರ್ಥವಾಗದ ತಮಿಳು, ತೆಲುಗು ಭಾಷೆಗಳು, ನಾಯಕ-ನಾಯಕಿ ಭಾವ ಇತ್ಯಾದಿಗಳೆಲ್ಲ ಇದನ್ನು ಅರ್ಥ ಮಾಡಿ ರಂಜಿಸಲು ಅಡ್ಡಿಯಾಗಿವೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಪದವರ್ಣಗಳ ಮೂಲ ಆಶಯವನ್ನು ಜಾಗೃತಗೊಳಿಸಲು ಹಾಗೂ ಪದವರ್ಣವನ್ನು ವೀಕ್ಷಿಸಲು ಬೇಕಾಗುವ ತಾಳ್ಮೆಯನ್ನು ಹೆಚ್ಚಿಸಲು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ತನ್ನ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ದಲ್ಲಿ ಈ ಹೊಸ ಯೋಜನೆಯೊಂದಿಗೆ ‘ವರ್ಣಿಕ’ ಎಂಬ ಶೀರ್ಷಿಕೆಯಲ್ಲಿ 2 ಸರಣಿಯಲ್ಲಿ 5 ಪದವರ್ಣಗಳನ್ನು ಪ್ರಸ್ತುತಪಡಿಸಿತು.
ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ದಿನಾಂಕ 08-06-2024ರಂದು ಸಂಜೆ ಗಂಟೆ 5-45ಕ್ಕೆ ‘ವರ್ಣಿಕ- 1’ ಪ್ರಾರಂಭವಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಹಿರಿಯ ವಿದ್ಯಾರ್ಥಿನಿ ವಿದುಷಿ ವಸುಧಾ ನಿರೂಪಣೆ ಮಾಡಿದರು. ಗಿರೀಶ್ ಕುಮಾರ ಶಂಖನಾದ ಹಾಗೂ ಪ್ರೀತಿಕಲಾ ಓಂಕಾರನಾದ ಮಾಡಿದರು. ಅಭ್ಯಾಗತರಾದ ಶ್ರೀ ಆದಿತ್ಯ ಕಲ್ಲೂರಾಯ ದೀಪ ಬೆಳಗುವ ಮೂಲಕ ಉದ್ಘಾಟನೆಗೈದರು. ಮೊದಲ ವರ್ಣ ಶ್ರೀಮತಿ ಅಂಕಿತ ಪ್ರಜ್ವಲ್ ಇವರು ಧನ್ಯಾಸಿರಾಗದ ಪದವರ್ಣ ಪ್ರಸ್ತುತಪಡಿಸಿದರು. 2ನೇ ಕಲಾವಿದೆ ಕುಮಾರಿ ವಿಂಧ್ಯಾ ಕಾರಂತರವರು ಶ್ರೀರಂಜನಿ ರಾಗದ ಕನ್ನಡದ ಪದವರ್ಣ ಪ್ರಸ್ತುತಪಡಿಸಿದರು.
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿ. ಶ್ಯಾಮ ಭಟ್ ಸುಳ್ಯ ಹಾಗೂ ಕೊಳಲಿನಲ್ಲಿ ಶ್ರೀ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಿದ್ದರು. ಅಭ್ಯಾಗತರಾದ ಪುತ್ತೂರಿನ ಸಾಫ್ಟ್ ವೇರ್ ಸಂಸ್ಥೆ ‘ದ ವೆಬ್ ಪೀಪಲ್’ನ ಶ್ರೀ ಆದಿತ್ಯ ಕಲ್ಲೂರಾಯ ಇವರು ಕಲೆಯ ಮಹತ್ವದ ಬಗ್ಗೆ ಹಾಗೂ ನೃತ್ಯ ಗುರುಗಳ ಒಡನಾಟದ ಬಗ್ಗೆ ಮಾತನಾಡಿದರು.