ಬೆಂಗಳೂರು : ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿರುವ ರಿಕ್ಕಿ ಕೇಜ್ ಹೆಸರಾಂತ ಗಾಯಕ, ಜನಪ್ರಿಯ ಸಂಗೀತ ನಿರ್ದೇಶಕ. ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಕರೊಲಿನಾದಲ್ಲಿ ಜನಿಸಿರುವ ರಿಕ್ಕಿ ಕೇಜ್ ಮೂಲತಃ ಭಾರತದವರು. ಎಂಟನೆ ವರ್ಷದಲ್ಲಿ ಹೆತ್ತವರೊಂದಿಗೆ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ರಿಕಿ ಕೇಜ್ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರ್ಣಗೊಳಿಸಿ, ಆಕ್ಸ್ ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಚಿಕಿತ್ಸಾ ವ್ಯಾಸಂಗವನ್ನು ಪೂರ್ಣಗೊಳಿಸಿದರು.
ಆದರೆ ದಂತ ಚಿಕಿತ್ಸಾ ವೃತ್ತಿಯನ್ನು ಆಯ್ದುಕೊಳ್ಳದೆ ಸಂಗೀತವನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡ ಇವರು ‘ವಿಂಡ್ಸ್ ಆಫ್ ಸಂಸಾರ’, ‘ಶಾಂತಿ ಸಂಸಾರ’, ‘ಡಿವೈನ್ ಟೈಡ್ಸ್’ ಮತ್ತು ‘ಬ್ರೇಕ್ ಆಫ್ ಡಾನ್’ ಧ್ವನಿಸುರಳಿಗಳಿಗೆ ಪ್ರಶಸ್ತಿ ಪಡೆದಿರುವ ರಿಕ್ಕಿ ಕೇಜ್ ಕನ್ನಡದ ಐದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಈವರೆಗೆ 21 ಆಲ್ಬಂಗಳನ್ನು ಇವರು ಸಂಯೋಜಿಸಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ ಎಲೆಕ್ಟ್ರಾನಿಕ್ ಸಂಗೀತಗಳ ಮಿಶ್ರಣ ಫ್ಯೂಜನ್ ಜಾನರ್ ಗೆ ಹೆಸರುವಾಸಿಯಾಗಿದ್ದಾರೆ. 3000ಕ್ಕೂ ಅಧಿಕ ಜಾಹೀರಾತುಗಳಿಗೆ ಸ್ವರಸಂಯೋಜನೆ, 2011ರ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದ ಕೀರ್ತಿ ಅವರದ್ದು. ಸಂಗೀತ ಶಿಕ್ಷಣ, ಪ್ರಾಣಿಗಳ ಹಕ್ಕು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಿಕಿ ಕೇಜ್ ‘ಮಜೊಲ್ಲಿ ಮ್ಯೂಸಿಕ್ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಜಗತ್ತಿನಾದ್ಯಂತ ಸಂಗೀತ ಕಾರ್ಯಕ್ರಮ ನೀಡಿರುವ ಅಪರೂಪದ ಗಾಯಕರು.