ಬಾಗಲಕೋಟೆ : ಹಿರಿಯ ಸಂಸ್ಕೃತ ವಿದ್ವಾನ್, ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಕುಲಪತಿಯೂ ಆಗಿರುವ ಕರ್ನಾಟಕ ಮೂಲದ ಡಾ. ವಾದಿರಾಜಾಚಾರ್ಯ ರಾಘವೇಂದ್ರಾಚಾರ್ಯ ಪಂಚಮುಖಿಯವರು ದೇಶದ ಅತ್ಯುನ್ನತ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾಗಿದ್ದಾರೆ. ಆಚಾರ್ಯಕೊಪ್ಪ ಗ್ರಾಮ ಮೂಲದ ಡಾ. ಪಂಚಮುಖಿಯವರ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲೇ ಬಾಗಲಕೋಟೆಗೆ ಬಂದು ನೆಲೆಸಿದ್ದರು. 1936ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದ ಪಂಚಮುಖಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದಿದ್ದರು. ಬಳಿಕ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದರು ಕುಟುಂಬದ ಕೆಲವರು ಈಗಲೂ ಬಾಗಲಕೋಟೆಯಲ್ಲಿದ್ದಾರೆ.
ಪಂಚಮುಖಿಯವರ ತಂದೆ ರಾಘವೇಂದ್ರ ಆಚಾರ್ಯ ಕೂಡ ಇತಿಹಾಸ ಮತ್ತು ವೇದಾಂತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ‘ವಿದ್ಯಾರತ್ನ’ ಬಿರುದಿಗೆ ಪಾತ್ರರಾಗಿದ್ದರು. ಡಾ. ಪಂಚಮುಖಿ ಅವರು ಹಲವು ವರ್ಷಗಳ ಕಾಲ ರೇಡಿಯೋದ ಸಂಸ್ಕೃತ ಭಾಷೆಯ ವಾರ್ತಾ ವಾಚಕರಾಗಿದ್ದರು. 40 ವರ್ಷಗಳ ಹಿಂದೆ ಅವರ ಸಂಸ್ಕೃತ ವಾರ್ತೆ ಕೇಳಿದವರು ಇಂದಿಗೂ ಅವರ ಧ್ವನಿಯನ್ನು ಸ್ಮರಿಸುತ್ತಾರೆ. ಡಾ. ಪಂಚಮುಖಿಯವರು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕ, ಮುಂಬಯಿ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ವಿದ್ವತ್ತಿಗೆ ಕುಲಪತಿಗಳ ಚಿನ್ನದ ಪದಕವೂ ದೊರೆತಿತ್ತು. ದಿಲ್ಲಿಯ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಪಿ.ಎಚ್.ಡಿ. ಪದವಿ ಪಡೆದ್ದರು.
ದಿಲ್ಲಿಯಲ್ಲಿ ಪೂರ್ಣಪ್ರಜ್ಞ ಶಾಲೆಯನ್ನು ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಆರಂಭಿಸಿದ ಕಾಲದಲ್ಲಿ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ದಿಲ್ಲಿಯಲ್ಲಿ ಪಲಿಮಾರು-ಭಂಡಾರಕೇರಿ ಮಠದ ಶ್ರೀವಿದ್ಯಾ ಮಾನ್ಯತೀರ್ಥರು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರೇ ಮೊದಲಾದ ಸ್ವಾಮೀಜಿಯವರು ಮೊಕ್ಕಾಂ ಹೂಡಿದ್ದ ಸಂದರ್ಭ ಅವರಲ್ಲಿ ಪಂಚಮುಖ ಶಾಸ್ತ್ರ ಪಾಠಗಳನ್ನು ಅಭ್ಯಸಿಸಿದ್ದರು. ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಒಂದು ಅವಧಿ ಸೇವೆ ಸಲ್ಲಿಸಿದ್ದರು. ಇವರು ಭಗವದ್ಗೀತೆ ಮತ್ತು ಮ್ಯಾನೇಜ್ಮೆಂಟ್ ವಿಷಯದಲ್ಲಿ ಸಂಶೋಧನೆ ನಡೆಸಿ ‘ಶ್ರೀಮದ್ಭಗವದ್ಗೀತಾ – ಇಟ್ಸ್ ರಿಲೆವೆನ್ಸ್ ಟು ಕಂಟೆಂಪರರಿ ಲೈಫ್’ ಎಂಬ ಕೃತಿ ರಚಿಸಿದ್ದಾರೆ. ಪೇಜಾವರ ಶ್ರೀಪಾದರು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಸಿದ್ದ ಅ.ಭಾ. ತತ್ವಜ್ಞಾನ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿ ಮತ್ತು ಶ್ರೀಕೃಷ್ಣಮಠದಲ್ಲಿ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿ ವಿಶೇಷ ಉಪನ್ಯಾಸ ನೀಡಲು ಆಗಮಿಸುತ್ತಿದ್ದರು.
ಮುಂಬಯಿ ವಿ.ವಿಯಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ್ದ ಇವರು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿಯಾಗಿ ಎರಡು (1998-2008) ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ದ್ವೈತ ಸಿದ್ಧಾಂತ ಅಧ್ಯಯನ ಕೇಂದ್ರ ಸ್ಥಾಪಿಸಿದ ಹಿರಿಮೆ ಅವರಿಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಸೈನ್ಸ್ ರಿಸರ್ಚ್ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಡಾ. ಪಂಚಮುಖಿಯವರು ತಮ್ಮ 89ನೇ ವಯಸ್ಸಿನಲ್ಲೂ ಮಂತ್ರಾಲಯದ ಶ್ರೀ ಗುರುಸಾರ್ವ ಭೌಮ ಸಂಸ್ಕೃತ ವಿದ್ಯಾಪೀಠದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಶ್ರೀ ಮಂತ್ರಾಲಯ ಶ್ರೀರಾಘವೇಂದ್ರ ಮಠದಿಂದ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’, ರಾಷ್ಟ್ರಪತಿಗಳಿಂದ ಸಂಸ್ಕೃತ ವಿದ್ವಾಂಸರಿಗೆ ನೀಡುವ ಪ್ರಶಸ್ತಿ ಪತ್ರ, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿ.ವಿ.ಯಿಂದ ‘ವಾಚಸ್ಪತಿ’ ಹೀಗೆ ಹಲವು ಗೌರವಗಳಿಗೆ ಭಾಜನರಾದ ಡಾ. ಪಂಚಮುಖಿಯವರಿಗೆ ಈಗ ‘ಪದ್ಮಶ್ರೀ’ ಗೌರವ ಸಂದಿದೆ.