ಪುತ್ತೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ವತಿಯಿಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹವು ದಿನಾಂಕ 01-07-2024ರಿಂದ 07-07-2024ರ ತನಕ ನಡೆಯಲಿದೆ.
ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ 8 ಗಂಟೆಯವರೆಗೆ ತಾಳಮದ್ದಳೆ ನಡೆಯಲಿದ್ದು, ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ. ಭಕ್ತ ಪ್ರಹ್ಲಾದ, ಸ್ಯಮಂತಕಮಣಿ, ಮೃತಸಂಜೀವಿನಿ, ಪಟ್ಟಾಭಿಷೇಕ, ಪ್ರತಿಸ್ವರ್ಗ, ಸುಧನ್ವ ಮೋಕ್ಷ, ಗಂಗಾ ಸಾರಥ್ಯ ಪ್ರಸಂಗದ ಪ್ರಸ್ತುತಿಯಾಗಲಿದೆ. ದಿನಾಂಕ 01-07-2024ರಂದು ಉದ್ಯಮಿ ಜಿ. ಬಲರಾಮ ಆಚಾರ್ಯ ಉದ್ಘಾಟಿಸಿ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾಪೋಷಕ ವೆಂಕಟೇಶ ನಾವಡ ಪೊಳಲಿಯವರಿಗೆ ಕುರಿಯ ಸ್ಮೃತಿ ಗೌರವ ಪ್ರದಾನ ನಡೆಯಲಿದೆ.
ದಿನಾಂಕ 07-07-2024ರಂದು ಸಮಾರೋಪ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಪದ್ಯಾಣ ಪ್ರಶಸ್ತಿ’, ಹಿಮ್ಮೇಳ ವಾದಕ ಸೀತಾರಾಮ ತೋಳ್ಪಡಿತ್ತಾಯರಿಗೆ ‘ಕುರಿಯ ಪ್ರಶಸ್ತಿ’, ಅರ್ಥಧಾರಿಗಳಾದ ಕೆ. ಭಾಸ್ಕರ ರಾವ್ ಮತ್ತು ಭಾಸ್ಕರ ಬಾರ್ಯ ಇವರಿಗೆ ‘ಕುರಿಯ ಸ್ಮೃತಿ ಗೌರವ’ ಪ್ರದಾನ ನಡೆಯಲಿದೆ ಎಂದು ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್, ಸಪ್ತಾಹ ಸಂಯೋಜಕರಾದ ರಮೇಶ್ ಭಟ್ ಪುತ್ತೂರು, ಸ್ವಸ್ತಿಕ ಪದ್ಯಾಣ ತಿಳಿಸಿದ್ದಾರೆ.