26 ಫೆಬ್ರವರಿ 2023, ಮಂಗಳೂರು: ಯಕ್ಷಗಾನ ಸಾಹಿತ್ಯವನ್ನು ಪದ್ಯ, ತಾಳ, ರಾಗ, ಲಯ ಮತ್ತು ಭಾವ ಬದ್ಧವಾಗಿ ಹಾಡಿ ಪ್ರದರ್ಶನಕ್ಕೆ ಪ್ರಧಾನ ಕಾರಣನಾಗುವವನೇ ಭಾಗವತ. ಅವನು ಭಗವಂತನ ಕತೆಗಳನ್ನು ರಂಗಕ್ಕೆ ತಂದು ತೋರಿಸುವವನೂ ಹೌದು. ಆಟ ಅಥವಾ ತಾಳ ಮದ್ದಳೆಯಲ್ಲಿ ಭಾಗವತನು ಮುಖ್ಯ ನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ, ಸೂತ್ರಧಾರ ಇಂತಹ ಒಬ್ಬರು ನಾಯಕ, ಸೂತ್ರಧಾರ ಪದ್ಯಾಣ ಗೋವಿಂದ ಭಟ್.
ಗಣಪತಿ ಭಟ್ ಹಾಗೂ ಅದಿತಿ ಅಮ್ಮ ಇವರ ಮಗನಾಗಿ 13.12.1968ರಂದು ಜನನ. ಮಾಂಬಾಡಿ ಸುಬ್ರಮಣ್ಯ ಭಟ್ ಇವರ ಯಕ್ಷಗಾನದ ಗುರುಗಳು. ಕಳೆದ ೩೦ ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ವೀರ ರಸ ಪ್ರಧಾನದ ಎಲ್ಲಾ ಪ್ರಸಂಗಗಳು ನೆಚ್ಚಿನವು ಹಾಗೂ ಬೆಳಗಿನ ಜಾವದ ಯಕ್ಷಗಾನದ ರಾಗಗಳು ನೆಚ್ಚಿನವು. ಕಡತೋಕ, ಪುತ್ತಿಗೆ, ಕುರಿಯ, ಪೂಂಜ ನೆಚ್ಚಿನ ಭಾಗವತರು. ನಿಡ್ಲೆ ನರಸಿಂಹ ಭಟ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್ ಇನ್ನೂ ಅನೇಕರು ಇವರ ನೆಚ್ಚಿನ ಕಲಾವಿದರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ: ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಆದರೆ ಬೇಸರವಿದೆ, ಅವಕಾಶಗಳು ವಿಪುಲವಾಗಿದ್ದರೂ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಬಹಳ ಬೇಸರವಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ: ಪ್ರೇಕ್ಷಕರ ಬಗ್ಗೆ ಹೇಳುವುದಾದರೆ ಸರಿಯಾದ ಪ್ರೇಕ್ಷಕರ ಪ್ರಮಾಣ ತುಂಬಾ ಕಡಿಮೆ. ವ್ಯಕ್ತಿನಿಷ್ಠರಾಗಿಯೇ (ಕೆಲವು ಕಲಾವಿದರನ್ನು ಮಾತ್ರ ಬೆಂಬಲಿಸಿ) ಯಕ್ಷಗಾನವನ್ನು ನೋಡುತ್ತಾರೆಯೇ ಹೊರತು ವಸ್ತುನಿಷ್ಠರಾಗಿಲ್ಲ.
ಹಲವು ಸನ್ಮಾನ ಹಾಗೂ ಪ್ರಶಸ್ತಿಗಳು ಪದ್ಯಾಣದವರಿಗೆ ಸಿಕ್ಕಿರುತ್ತದೆ. ಓದುವುದು, ಕ್ರಿಕೆಟ್, ಯಾರಿಗಾದರೂ ಯಾವುದೇ ರೀತಿಯ ಸಹಾಯ ಮಾಡುವುದು ಇವರ ಹವ್ಯಾಸಗಳು.
ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾಗಿದ್ದ ಕಲ್ಲಾಡಿ ವಿಠಲ ಶೆಟ್ಟಿ, ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪದ್ಯಾಣ ಗೋವಿಂದ ಭಟ್.
- ಶ್ರವಣ್ ಕಾರಂತ್ ಕೆ., ಶಕ್ತಿನಗರ ಮಂಗಳೂರು