ಬೆಂಗಳೂರು : ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 15 ಅಕ್ಟೋಬರ್ 2025ರಂದು ಕನ್ನಡಪರ ಚಿಂತಕ, ಹೋರಾಟಗಾರ ಸಾಮಾಜಿಕ, ಸಾಂಸ್ಕೃತಿಕ ಸಂಘಟಕ ಪಾಲನೇತ್ರ ಇವರಿಗೆ ಅಭಿನಂದನೆ ಮತ್ತು ‘ಕನ್ನಡ ಜಂಗಮ’ ಗ್ರಂಥ ಲೋಕಾರ್ಪಣಾ ಸಮಾರಂಭ ನಡೆಯಿತು.
ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾಸ್ವಾಮಿಗಳು, ದೇಗುಲಮಠದ ಡಾ.ಚನ್ನಬಸವ ಸ್ವಾಮೀಜಿಗಳು, ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮತ್ತು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ, ನಿವೃತ್ತ ಐ.ಎ.ಎಸ್. ಅಧಿಕಾರಿ ಸಿ. ಸೋಮಶೇಖರ್, ಕನ್ನಡ ಪರ ಹೋರಾಟಗಾರ ಡಾ. ಬೈರಮಂಗಲ ರಾಮೇಗೌಡ, ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರ, ಗುರುನಾಥ ಹೊಳ್ಳ, ಅಭಿನಂದನಾ ಸಮಿತಿ ಅಧ್ಯಕ್ಷ ಶಿವರಾಮೇಗೌಡ ಇವರುಗಳು ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ದಲಿಂಗಾ ಸ್ವಾಮಿಗಳು ಮಾತನಾಡಿ “ಕನ್ನಡದ ಅಭಿಮಾನಿಗಳು ಗಟ್ಟಿಯಾಗಿ ನಿಲ್ಲುತ್ತಾರೆ. ಕುಗ್ರಾಮದಲ್ಲಿ ಹುಟ್ಚಿದ ಪಾಲನೇತ್ರರವರು ಬೆಂಗಳೂರಿಗೆ ಬಂದು ಕನ್ನಡ ಚಳುವಳಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ವಿ. ಸೋಮಣ್ಣ ಮಾತನಾಡಿ, “ನಡವಳಿಕೆ, ದೂರದೃಷ್ಟಿ ಚಿಂತನೆ ಇದ್ದಾಗ, ಜಾತಿ, ಧರ್ಮ ಬರುವುದಿಲ್ಲ. ಪಾಲನೇತ್ರ ಕನ್ನಡ ಪರ ಹೋರಾಟಗಾರ. ಪಾಲನೇತ್ರ ಸ್ವಾಭಿಮಾನಿ, ಕೃತಜ್ಞತೆ ಇರುವ ವ್ಯಕ್ತಿತ್ವ, ಕನ್ನಡ ಪರ ಹೋರಾಟದಲ್ಲಿ ಪಾಲನೇತ್ರನಿಗೆ ಪಾಲನೇತ್ರನೆ ಸಾಟಿ. ಗುರಿಯಿಟ್ಟು ಕೆಲಸ ಮಾಡಬೇಕು. ಆಗ ಸಾಧನೆ ಮಾಡಲು ಸಾಧ್ಯ. ನಾಡು, ನುಡಿಯ ಅವಿರತ ಸೇವೆಯಿಂದ ಪಾಲನೇತ್ರರವರು ಕನ್ನಡದ ಕಟ್ಟಾಳುವಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಪಾಲನೇತ್ರರವರು ಕನ್ನಡಿಗನಾಗಿ, ತಾಯಿ ಭುವನೇಶ್ವರಿ ಆಶೀರ್ವಾದದಿಂದ ಕನ್ನಡ ಪರ ಕೆಲಸಗಳನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆದಿದ್ದಾರೆ. ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸ ಶಾಶ್ವತ. ದೇಶಕ್ಕೆ ಉತ್ತಮ ಭವಿಷ್ಯವಿದೆ. ಪಾಲನೇತ್ರರವರ ಮನವಿ ಮೇರೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಬಸವ ಜಯಂತಿ ಅಚರಣೆಯನ್ನು ನವದೆಹಲಿಯಲ್ಲಿ ಅಚರಿಸಲಾಯಿತು” ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಾಲನೇತ್ರ, ನಾಲ್ಕು ದಶಕಗಳ ಕಾಲ ಕನ್ನಡ ಪರ ಹೋರಾಟದಲ್ಲಿ ನನಗೆ ಸಹಕಾರ ನೀಡಿದ, ಬೆಂಬಲಿಸಿದ ಎಲ್ಲ ಕನ್ನಡ ಹೋರಾಟಗಾರರಿಗೆ ಋಣಿಯಾಗಿದ್ದೇನೆ ಎಂದರು. ಕನ್ನಡ ಪರ ಹೋರಾಟಗಾರರು ನನ್ನ ಸಂಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಿಗರು ಎಲ್ಲರು ಒಟ್ಟಾಗಿ ಸಂಘಟಿತರಾಗಿ ಉಳಿಯೋಣ ಎಂದರು. ಕನ್ನಡ ಪರ ಸಾಧಕರಾದ ಮಾಜಿ ಮೇಯರ್ ಜೆ. ಹುಚ್ಚಪ್ಪ, ಎ. ಅಮೃತ್ ರಾಜ್, ಡಾ. ತಲಕಾಡು ಚಿಕ್ಕರಂಗೇಗೌಡ, ಕೆ. ಮಂಜನಾಥ ದೇವ, ವ.ಚ. ಚನ್ನೇಗೌಡ, ನಾ. ಶ್ರೀಧರ್, ಗೋ. ಮೂರ್ತಿ ಯಾದವ್, ಜಿ. ಗುರುಪ್ರಸಾದ್, ಬಿ.ಆರ್. ಶಿವಕುಮಾರ್, ಎಂ.ಜಿ. ವಿಜಯಲಕ್ಷ್ಮಿ ಇವರಿಗೆ ಗೌರವಿಸಿ, ಸನ್ಮಾನಿಸಲಾಯಿತು.