ಪುತ್ತೂರು: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಪುತ್ತೂರು ಸುಕೃತೀಂದ್ರ ಕಲಾ ಮಂಟಪದಲ್ಲಿ ದಿನಾಂಕ 19-05-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ಡಾ. ವಿವೇಕ ರೈ ಮಾತನಾಡಿ “ಡಾ. ರಾಮಕೃಷ್ಣ ಆಚಾರ್ ಅವರು ಎಲ್ಲೆಲ್ಲ ಇದ್ದರೋ ಅಲ್ಲೆಲ್ಲ ಸಂಘಟನೆ ಇದೆ. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯವೆಂಬುದು ನಾಲ್ಕು ಚಕ್ರವಿದ್ದಂತಿತ್ತು. ಇದರೊಳಗೆ ತುಳು ಭಾಷೆಯ ಅಧ್ಯಯನ ವಿಶೇಷವಾಗಿತ್ತು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಉಪನ್ಯಾಸಕರಾಗಿ, ತನ್ನ ನಿವೃತ್ತಿಯ ತನಕ ಅಭ್ಯಾಸ ಮಾಡುತ್ತಾ ಬಂದಿರುವ ಅವರು ಬದುಕಿನಲ್ಲಿ ವಿಶ್ರಾಂತಿಯನ್ನು ಪಡೆದಿಲ್ಲ. 2010ರಲ್ಲಿ ಅನಾರೋಗ್ಯದ ಕಾರಣದಿಂದ ಕಾಲನ್ನು ಕಳೆದುಕೊಂಡರೂ 14 ವರ್ಷಗಳ ಕಾಲ ಒಂದೇ ಕಾಲಿನಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರು. ಅವರ ಮಹತ್ವದ ಕೃತಿಗಳು ಬಂದದ್ದೇ 2010ರ ಬಳಿಕ. 1975 – 76ನೇ ಕಾಲಕ್ಕೆ ಬಂದ ತುಳು ಜನಪದ ಕಥೆಗಳ ಕನ್ನಡ ಅನುವಾದಕ್ಕೆ ನಾನೇ ಮುನ್ನುಡಿ ಬರೆದಿದ್ದೆ. ಅವರ ‘1837ರ ತುಳುವರ ರೈತ ಹೋರಾಟ’ ಕನ್ನಡದಲ್ಲಿ ಮೊದಲು ಬಂತು. ಬಳಿಕ ಅದು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಯಾಯಿತು.” ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿದರು.
ಶ್ರೀ ನರೇಂದ್ರ ರೈ ದೇರ್ಲ ಇವರು, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಒಡನಾಡಿಗಳು, ಕುಟುಂಬಸ್ತರು, ಹಿತೈಷಿಗಳು, ಬರೆದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕರೂಪಕ್ಕೆ ತಂದ ‘ಪಾಲ್ತಾಡಿ ನೆನಪು’ ಕಿರು ಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಪರಿಚಯಿಸಿ, ಭಾಗವಹಿಸಿದವರೆಲ್ಲರಿಗೂ ಉಚಿತವಾಗಿ ನೀಡಲಾಯಿತು. ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ರಚಿಸಿದ ತುಳು ಗೀತೆಗಳ ಸಂಗೀತ ಕಾರ್ಯಕ್ರಮವು ಕೆ. ಆರ್. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದು, ರತ್ನಾವತಿ ಜೆ. ಬೈಕಾಡಿ ಹಾಗೂ ಅಕ್ಷತಾ ಬೈಕಾಡಿ ಹಾಡುಗಳಿಗೆ ಧ್ವನಿಯಾದರು. ಇವರಿಗೆ ಹಾರ್ಮೋನಿಯಂನಲ್ಲಿ ಸುಧನ್ವಕೃಷ್ಣ ಹಾಗೂ ತಬಲಾದಲ್ಲಿ ಶರತ್ ಪೆರ್ಲ ಸಹಕರಿಸಿದರು. ಪಾಲ್ತಾಡಿ ಅವರ ಸಹೋದರರಾದ ಭಾಸ್ಕರ ಆಚಾರ್, ರಘುನಾಥ ಆಚಾರ್ ಕಲಾವಿದರನ್ನು ಗೌರವಿಸಿದರು.
ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಪತ್ನಿ ಸುಮಾ ಆರ್. ಆಚಾರ್, ಪುತ್ರ ಹರ್ಷವರ್ಧನ, ಪುತ್ರಿಯರಾದ ಕಿರಣ ಪಿ. ಆರ್., ಸುಪ್ರಿಯಾ ಪಿ. ಆರ್., ಸೊಸೆ ಸುಧಾ ಹರ್ಷವರ್ಧನ, ಅಳಿಯಂದಿರಾದ ಕೃಷ್ಣ ಎಂ. ವಿ., ಜಯಪಾಲ ಎಚ್. ಆರ್. ಉಪಸ್ಥಿತರಿದ್ದರು. ಸಭೆಯಲ್ಲಿ ಸಾಹಿತಿಗಳು, ಹಿತೈಷಿಗಳು ಬಂಧುಗಳು ಪಾಲ್ತಾಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.