ಮಂಗಳೂರು : ಕನ್ನಡ ಹಾಗೂ ತುಳು ಭಾಷೆಯಲ್ಲಿ ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸಂಶೋಧಕ, ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಇವರು ಕರ್ನಾಟಕ ರಾಜ್ಯ ಸರಕಾರ ಸಾಹಿತ್ಯಕ್ಕೆ ನೀಡುವ ಅತ್ಯುನ್ನತ ಗೌರವವಾದ ‘ಪಂಪ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ಐದು ಲಕ್ಷ ರೂ. ನಗದು ಹೊಂದಿದೆ.
ಡಾ. ಬಿ.ಎ. ವಿವೇಕ ರೈಯವರು ತಂದೆ ಅಗ್ರಾಳ ಪುರಂದರ ರೈಯವರ ಮೂಲಕ ಶಿವರಾಮ ಕಾರಂತರ ಸಂಪರ್ಕ ಬೆಳೆಸಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅದ್ವಿತೀಯ ಕಾರ್ಯ ನಡೆಸಿ, ಸಂಶೋಧನೆಯ ಯೋಜನೆಗಳನ್ನು ನಿರ್ವಹಿಸಿ, ಗ್ರಂಥಗಳನ್ನು ಪ್ರಕಟಿಸಿದರು. ಪ್ರಾದೇಶಿಕ ಅಧ್ಯಯನ ಹಾಗೂ ಸಂಸ್ಕೃತಿಯ ಅಧ್ಯಯನ ಕ್ಷೇತ್ರದ ಇವರ ಕೆಲಸಗಳು ಅಂತಾರಾಷ್ಟ್ರೀಯ ವಿದ್ವಾಂಸರ ಗಮನ ಸೆಳೆದಿವೆ.
ಅಗ್ರಾಳ ಪುರಂದರ ರೈ – ಯಮುನಾ ರೈ ದಂಪತಿಯ ಪುತ್ರರಾಗಿ ಬಿ.ಎ. ವಿವೇಕ ರೈ 1946ರಲ್ಲಿ ಪುಣಚದಲ್ಲಿ ಜನಿಸಿದರು. ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ, ಪುತ್ತೂರು ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ., ಬಿ.ಎಸ್ಸಿ. ಮೈಸೂರು ವಿ.ವಿ.ಯ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ಕನ್ನಡ ಮಾಡಿದ ಇವರು 1981ರಲ್ಲಿ ‘ತುಳು ಜನಪದ ಸಾಹಿತ್ಯ’ದಲ್ಲಿ ಪಿ.ಎಚ್.ಡಿ. ಪಡೆದರು. ಮೈಸೂರು ವಿ.ವಿ. ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿ, ಅನಂತರ ಮಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ವಿಭಾಗದಲ್ಲಿ 34 ವರ್ಷಗಳ ಕಾಲ ಅಧ್ಯಾಪನ ಹಾಗೂ ಸಂಶೋಧನೆ ಕೈಗೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ರಾಜ್ಯ ಮುಕ್ತ ವಿ.ವಿ. ಕುಲಪತಿಯಾಗಿದ್ದರು.
ಜರ್ಮನಿಯ ವೂಲ್ಫ್ ಬರ್ಗ್ ವಿ.ವಿ.ಯ ಇಂಡಾಲಜಿ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದರು. ಮಂಗಳೂರು ವಿ.ವಿ. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರು ಮಾತ್ರವಲ್ಲದೆ ವಿವಿಧ ವಲಯದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಹಲವಾರು ಕೃತಿಗಳನ್ನು ಬರೆದ ರೈಯವರು ಬರಹ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.
“ಪಂಪನ ಹೆಸರಿನ ಪ್ರಶಸ್ತಿ ಬಂದಿರುವುದು ನನಗೆ ದೊರೆತ ವಿಶೇಷ ಗೌರವ ಎಂದು ಭಾವಿಸುತ್ತೇನೆ. ಈ ಪ್ರಶಸ್ತಿಯನ್ನು ಮೊದಲು ಪಡೆದವರು ಕುವೆಂಪು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿವರಾಮ ಕಾರಂತರು. ಸೇಡಿಯಾವು ಕೃಷ್ಣ ಭಟ್, ಕಯ್ಯಾರ ಕಿಂಞಣ್ಣ ರೈಯವರಿಗೂ ಈ ಪ್ರಶಸ್ತಿ ಸಂದಿದೆ. ಅವರಂತಹ ಹಿರಿಯರ ಸಾಲಿನಲ್ಲಿ ಸೇರುವುದು ನನ್ನ ವಿಶೇಷ ಭಾಗ್ಯ. ಪಂಪನ ಹೆಸರಿನಲ್ಲಿಯೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿರುವುದನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಜನ್ಮದಲ್ಲಿ ಬಂದ ಕುಲವನ್ನು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮೊತ್ತಮೊದಲು ಧಿಕ್ಕರಿಸಿದ ಪಂಪನ ಕಾವ್ಯಗಳ ಬಗ್ಗೆಯೇ ಕೃತಿಯೊಂದನ್ನು ಬರೆಯಬೇಕು ಎಂಬ ಆಸೆ ಇತ್ತು, ಅದಕ್ಕೆ ಈಗ ಇಂಬು ಸಿಕ್ಕಿದೆ. ಅವರ ಕಾವ್ಯಗಳನ್ನು ಓದಿ ರೋಮಾಂಚನಗೊಂಡವ ನಾನು, ಈಗ ಆ ಹೆಸರಿನಲ್ಲೇ ಪ್ರಶಸ್ತಿ ಬಂದಿರುವುದು ಸಂತೃಪ್ತಿ ತಂದಿದೆ. ಕೃತಿ ಬರೆಯುವ ಕನಸು ನನಸಾಗಿಸಲು ಮತ್ತಷ್ಟು ಪ್ರೇರಣೆಯೂ ಸಿಕ್ಕಿದೆ. ‘ವೈಚಾರಿಕ ಕವಿ’ ಎಂಬ ನೆಲೆಯಲ್ಲಿ ಕುವೆಂಪು ಮೇಲೆ ನನಗೆ ಅಪಾರ ಗೌರವ, ಪಂಪ ಇದಕ್ಕೂ ಮೊದಲು ವೈಚಾರಿಕತೆಯನ್ನು ಹಬ್ಬಿದ್ದ, ಜನ್ಮದ ಸಂಬಂಧಕ್ಕಿಂತ ಸ್ನೇಹಕ್ಕೆ ಬೆಲೆ ಕಲ್ಪಿಸಿದ್ದ ಪಂಪ ಸಿರಿಯನ್ನೂ ಧಿಕ್ಕರಿಸಿದ್ದ. ಈ ನೆಲೆಯಲ್ಲೂ ಈ ಕವಿ ನನಗೆ ಆಪ್ತ. ಮೂರು ದಶಕಗಳ ಕಾಲ ಪಂಪನ ಬಗ್ಗೆ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ್ದೇನೆ. ಜರ್ಮನಿಯಲ್ಲೂ ಪಂಪನ ಕಾವ್ಯಗಳ ಕಂಪು ಹರಿಸಲು ಪ್ರಯತ್ನಿಸಿದ್ದೇನೆ. ಈ ಎಲ್ಲ ಪರಿಕ್ರಮ, ಧ್ಯೇಯ, ಧೋರಣೆಗೆ ಈಗ ಗೌರವ ಸಿಕ್ಕಿದೆ. ಪುರಾಣಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲು 10ನೇ ಶತಮಾನದಲ್ಲೇ ಪಂಪ ಧೈರ್ಯ ತೋರಿದ್ದ. ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಸಂದೇಶವನ್ನೂ ಸಾರಿದ್ದ. ಆ ನಂತರ ಬಸವಣ್ಣ, ಕುವೆಂಪು ಮುಂತಾದವರು ಕೂಡ ಇಂಥ ವೈಚಾರಿಕ ಸಂದೇಶಗಳನ್ನು ಸಾರಿದ್ದಾರೆ. ವಿಜ್ಞಾನದಿಂದ ಆಕಸ್ಮಿಕವಾಗಿ ಕನ್ನಡಕ್ಕೆ ಬಂದ ನನಗೆ ಈಗ ಇದು ಅನ್ನದ ಭಾಷೆ ಮಾತ್ರವಲ್ಲ, ಬದುಕಿನ ಭಾಷೆಯೂ ಆಗಿದೆ. ವಯಸ್ಸಾಗಿದೆ, ಆದರೂ ನನ್ನ ಮಿತಿಯಲ್ಲಿ ಕನ್ನಡದ ಕೆಲಸ ಮುಂದುವರಿಸುವೆ” ಇದು ‘ಪಂಪ ಪ್ರಶಸ್ತಿ’ಗೆ ಭಾಜನರಾಗಿರುವ ವಿದ್ವಾಂಸ, ಅನುವಾದಕ, ಸಂಶೋಧಕ ಮಂಗಳೂರಿನ ಬಿ.ಎ. ವಿವೇಕ ರೈಯವರ ಮನದಾಳದ ಮಾತು.