ಕಾಸರಗೋಡು : ಪಣಂಬೂರು ವೆಂಕಟರಾಯ ಐತಾಳ ಪ್ರತಿಷ್ಠಾನದ ವತಿಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15 ಜುಲೈ 2025 ರಂದು ಕಾಶರಗೋದಡಿನ ಕುರಿಯದಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಿತು.
ಪ್ರತಿಷ್ಠಾನದ ಪರವಾಗಿ ಪಣಂಬೂರು ವಾಸುದೇವ ಐತಾಳ, ಡಾ. ಸುನಿಲ್ ಮುಂಡ್ಕೂರು, ಮುರಲಿ ಕಡೆಕಾರ್, ರವಿಚಂದ್ರ ಭಟ್ ರೂಪಾಯಿ 10,000 ನಗದನ್ನೊಳಗೊಂಡ ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಗಳು “ವೆಂಕಟ್ರಾಯ ಐತಾಳರು ಯಕ್ಷಗಾನದ ಸರ್ವಾಂಗವನ್ನು ಬಲ್ಲ ಶ್ರೇಷ್ಠ ಗುರುವಾಗಿದ್ದರು. ನೂರಾರು ಕಲಾವಿದರ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು. ಐತಾಳರಿಂದ ತಾನು ಕೂಡ ಉಪಕೃತನಾಗಿದ್ದೆ. ಎಂಟು ವರ್ಷಗಳ ಹಿಂದೆ, ತನ್ನ ತಂದೆಯ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿದ ಐತಾಳರ ಸುಪುತ್ರಿ ಶ್ರೀಮತಿ ಗೋಪಿಕಾ ಮಯ್ಯ ಮತ್ತು ಅವರ ಸಹೋದರಿ ಅಭಿನಂದನಾರ್ಹರು” ಎಂದರು. ಬಳಿಕ ಪ್ರತಿಷ್ಠಾನದ ತಂಡ ಕುರಿಯ ವಿಠಲ ಶಾಸ್ತ್ರಿಗಳ ಮೂಲ ಮನೆಗೆ ಭೇಟಿ ನೀಡಿತು.

