ಕೊಪ್ಪಳ : ಮುಜುಮದಾರ ಫೌಂಡೇಶನ್ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಚಾಕ್ಷರಿ ಹಿರೇಮಠ ಇವರ ‘ನುಡಿ ನಮನ’ ಕಾರ್ಯಕ್ರಮವು ದಿನಾಂಕ 25 ಮಾರ್ಚ್ 2025ರ ಮಂಗಳವಾರದಂದು ಕೊಪ್ಪಳದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಮಾತನಾಡಿ “ನಮ್ಮ ಭಾಗದ ಸಾಹಿತಿಗಳ ಪುಸ್ತಕಗಳನ್ನು ಓದಿ ಅವರನ್ನು ನಾವು ಗೌರವಿಸಬೇಕು. ನಮ್ಮ ದೇಶದಲ್ಲಿ ಬದುಕಿದ್ದಾಗ ಅವರ ಬಗ್ಗೆ ಆಲೋಚನೆ ಮಾಡುವುದಿಲ್ಲ, ಅವರು ಮರಣ ಹೊಂದಿದ ನಂತರ ಅವರ ಕುರಿತು ಹೆಚ್ಚು ಚರ್ಚೆ ಮಾಡುತ್ತೇವೆ. ಈ ರೀತಿ ಪದ್ಧತಿ ಹೋಗಬೇಕು. ಪಂಚಾಕ್ಷರಿ ಹಿರೇಮಠ ಅವರು 1947 ಆಗಸ್ಟ್ 15 ರಂದು ಕೊಪ್ಪಳ ಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ್ದರು. ಆಗ ಅವರು 7 ನೇ ತರಗತಿ ಓದುತ್ತಿದ್ದರು. ಇವರು ಧಾರವಾಡದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಇವರು ಕಥೆ, ಕಾದಂಬರಿ, ಕಥಾ ಸಂಕಲನ, ಅನುವಾದ ಹೀಗೆ 250ಕ್ಕೂ ಮಿಕ್ಕಿ ಪುಸ್ತಕಗಳನ್ನು ಬರೆದಿದ್ದಾರೆ. ಇವರಿಗೆ 1985ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಬಹು ಭಾಷಾ ಪಂಡಿತರಾದ ಇವರು
ಬಹಳಷ್ಟು ದೇಶಗಳನ್ನು ಸುತ್ತಾಡಿದ್ದರು. ಇವರು ಬಿಸರಳ್ಳಿ ಊರಿಗೆ ಬಂದಾಗ ಬಹಳಷ್ಟು ಯುವಕರಿಗೆ ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರೋತ್ಸಾಹಿಸುತ್ತಿದ್ದರು. ಅಂತಾರಾಷ್ಟ್ರೀಯ ಕವಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಇವರು ತೆಲುಗು, ತಮಿಳು ಮತ್ತು ಮಲೆಯಾಳಂ ಈ ಮೂರು ಭಾಷೆಗಳನ್ನು ಕಲಿತು, ಈ ಮೂರೂ ಭಾಷೆಗಳ ಪ್ರಮುಖ ಕವಿಗಳ ಕಲ್ಪನೆ ಮತ್ತು ಚಿತ್ರಗಳನ್ನು ಸಂಗ್ರಹಣೆ ಮಾಡಿ ಬರೆದಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಇವರು ಕಬೀರ್ ದಾಸ್ ಬರೆದಿರುವ ‘ರಾಂಗೆ ರಾಘವ’ ಕಾದಂಬರಿ ಕುರಿತು ಮಾತನಾಡುತ್ತಾ “ಈ ರೀತಿಯ ಕವಿಗಳ ಕುರಿತು ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಪಂಚಾಕ್ಷರಿ ಹಿರೇಮಠ ಅವರ ಜ್ಞಾನ, ಹೋರಾಟಗಳು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕು” ಎಂದರು.
ಕವಯಿತ್ರಿ ಅರುಣಾ ನರೇಂದ್ರ ಮಾತನಾಡಿ “ಪಂಚಾಕ್ಷರಿ ಹಿರೇಮಠ ಮಗುವಿನ ತರಹದ ಮನಸ್ಸುಳ್ಳವರು. ಇವರು ನಮ್ಮ ಭಾಗದ ಪ್ರಮುಖ ಕವಿ. ಇವರು 500 ಕ್ಕೂ ಹೆಚ್ಚು ಮುಕ್ತಕಗಳನ್ನು ಬರೆದಿದ್ದಾರೆ. ಇವರು ಒಬ್ಬ ಶ್ರೇಷ್ಠ ಕವಿ ಮತ್ತು ಪಂಡಿತರು” ಎಂದು ಅಭಿಪ್ರಾಯಪಟ್ಟರು.
ಹಿರಿಯ ಕವಿ ಮತ್ತು ವಕೀಲರಾದ ವಿಜಯ್ ಅಮೃತ್ ರಾಜು ಮಾತನಾಡಿ “ನಾವು ಬೇರೆ ದೇಶ, ಬೇರೆ ರಾಜ್ಯದ ಕವಿಗಳ ಮತ್ತು ಸಾಹಿತಿಗಳ ಪುಸ್ತಕಗಳನ್ನು ಓದಿ ಅವರ ಕುರಿತು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಪಕ್ಕದ ಊರಿನ ಸಾಹಿತಿಗಳ ಕುರಿತು ನಮಗೆ ಪರಿಚಯವೇ ಇರುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ “ಡಾ. ಪಂಚಾಕ್ಷರಿ ಹಿರೇಮಠ ಇವರು ಕರ್ನಾಟಕ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದರು. ತರಗತಿ ಮತ್ತು ಮನೆಯಲ್ಲಿ ಸಮಾಜದಲ್ಲಿರುವ ಸಮಸ್ಯೆಗಳ ಕುರಿತು ಸಂವಾದ ಮಾಡುತ್ತಿದ್ದರು. ಇವರು ನಯ, ವಿನಯ ಉಳ್ಳವರಾಗಿದ್ದರು. ಸಾಹಿತ್ಯದಲ್ಲಿ ಪ್ರಾವೀಣ್ಯತೆ ಹೊಂದಿದ್ದ ಇವರು ಆಶಾವಾದಿ ದೃಷ್ಟಿಕೋನವನ್ನು ಹೊಂದಿದ್ದರು. ಭಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಶ್ರೀಯುತರು ಸರಳ, ಸೌಜನ್ಯಶೀಲತೆ ಉಳ್ಳವರಾಗಿದ್ದರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಜಾಮದಾರ ಫೌಂಡೇಶನ್ ಇದರ ಶ್ರೀಮತಿ ಸಾವಿತ್ರಿ ಮುಜಾಮದಾರ, ರವಿ ಕಾಂತನವರು, ಮಹಾಂತೇಶ್ ಕೊತಬಾಳ, ಡಾ. ಮಹಾಂತೇಶ ನೆಲಾಗಣಿ, ನರೇಂದ್ರ ಪಾಟೀಲ್, ಲಕ್ಷ್ಮಣ್ ಪೀರಗಾರ್, ಶರಣು ಶಟ್ಟರ್, ಡಾ. ನರಸಿಂಹ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಮಣ್ಣ ಹಾಲ್ಮೋಸುರುಕೇರಿ ನಿರೂಪಿಸಿ, ಡಾ. ಸುಧಾಕರ್ ವಂದಿಸಿದರು.