ಉಡುಪಿ : ತುಳುಕೂಟ (ರಿ) ಉಡುಪಿ, ಪ್ರತಿ ವರ್ಷ ನೀಡುತ್ತಿರುವ ದಿ. ಎಸ್. ಯು. ಪಣಿಯಾಡಿ ಪ್ರಶಸ್ತಿಗೆ ಈ ವರ್ಷದಲ್ಲಿ ಮುಂಬೈಯ ಶ್ರೀಮತಿ ಶಾರದಾ ವಿ. ಅಂಚನ್ ಕೊಡವೂರು ಇವರ ‘ಅಕೇರಿದ ಎಕ್ಕ್’ ಹಸ್ತಪ್ರತಿಯು ಆಯ್ಕೆಯಾಗಿದೆ .
ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಶ್ರೀ ಎಸ್. ಯು. ಪಣಿಯಾಡಿ ಇವರ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸದುದ್ದೇಶದಿಂದ ಕಳೆದ 30 ವರ್ಷಗಳಿಂದ ತುಳುಕೂಟ (ರಿ.) ಉಡುಪಿ ಇವರು ಪಣಿಯಾಡಿ ಪ್ರಶಸ್ತಿ ನೀಡುತ್ತಿದ್ದಾರೆ.
ಈ ಸಲ ತೀರ್ಪುಗಾರರಾಗಿ ಶ್ರೀ ನಿತ್ಯಾನಂದ ಪಡ್ರೆ, ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಹಾಗು ಶ್ರೀ ಪುತ್ತಿಗೆ ಪದ್ಮನಾಭ ರೈ ಸಹಕರಿಸಿದರು .
ಈ ಬಾರಿಯ ಪಣಿಯಾಡಿ ಪುರಸ್ಕಾರಕ್ಕೆ ಆಯ್ಕೆಯಾದ ಬರಹಗಾರ್ತಿ ಶ್ರೀಮತಿ ಶಾರದಾ ಇವರು ಮೂಲತಃ ಉಡುಪಿ ಜಿಲ್ಲೆಯ ಕೊಡವೂರಿನವರು . ಸಾಹಿತ್ಯ ವಲಯದಲ್ಲಿ ಚಿರಪರಿಚಿತರು . ಬಿ ಎಸ್ಸಿ. ಹಾಗು ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ವ್ಯಾಸಂಗ ಮಾಡಿದ ಇವರು ನವೀ ಮುಂಬಯಿಯ ಎಂ. ಜಿ. ಎಂ. ಮೆಡಿಕಲ್ ಕಾಲೇಜಿನಲ್ಲಿ ರಕ್ತ ನಿಧಿ ತಂತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳು ಹಾಗು ಕನ್ನಡದಲ್ಲಿ 18 ಕೃತಿಗಳು ಈಗಾಗಲೇ ಪ್ರಕಟಗೊಂಡು ಹಲವು ಪ್ರತಿಷ್ಠಿತ ಪುರಸ್ಕಾರಗಳು ಇವರ ಮಡಿಲು ಸೇರಿವೆ.
ಪಣಿಯಾಡಿ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಲ್ಲಿ ನಡೆಯಲಿರುವುದು ಎಂದು ಉಡುಪಿ ತುಳು ಕೂಟದ ಅಧ್ಯಕ್ಷರಾದ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ ಹಾಗು ಕಾರ್ಯದರ್ಶಿ ಶ್ರೀ ಗಂಗಾಧರ್ ಕಿದಿಯೂರ್ ಮತ್ತು ಪಣಿಯಾಡಿ ಪ್ರಶಸ್ತಿಯ ಸಂಚಾಲಕಿ ಶ್ರೀಮತಿ ಶಿಲ್ಪಾ ಜೋಶಿ ತಿಳಿಸಿದ್ದಾರೆ .