ಉಡುಪಿಃ ತುಳುಕೂಟ ಉಡುಪಿ ವತಿಯಿಂದ ಪ್ರತಿ ವರ್ಷವೂ ನೀಡುತ್ತಿರುವ ದಿ. ಎಸ್. ಯು. ಪಣಿಯಾಡಿ ಪ್ರಶಸ್ತಿಗೆ 2024ನೇ ಸಾಲಿನಲ್ಲಿ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರುಂಬಾಟ’ ಎಂಬ ಹಸ್ತಪ್ರತಿಯು ಆಯ್ಕೆಯಾಗಿದೆ.
ತುಳುಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳವಳಿಗೆ ಚಾಲನೆ ನೀಡಿದ ಹಾಗೂ ತುಳುವಿನ ಮೊತ್ತಮೊದಲ ಕಾದಂಬರಿಕಾರ ದಿ. ಎಸ್. ಯು. ಪಣಿಯಾಡಿ ಅವರನ್ನು ಸದಾ ನೆನಪಿಟ್ಟುಕೊಳ್ಳುವ ಉದ್ದೇಶದಿಂದ ಕಳೆದ 29 ವರ್ಷಗಳಿಂದ ತುಳುಕೂಟ ಉಡುಪಿ ಆಶ್ರಯದಲ್ಲಿ ಪಣಿಯಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಫಲಕ ಸಮೇತ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಈ ಬಾರಿ ಸ್ಪರ್ಧೆಯ ಪ್ರಶಸ್ತಿ ಸಮಿತಿಯಲ್ಲಿ ಹಿರಿಯ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಸಕು ಪಾಂಗಾಳ ಹಾಗೂ ಪುತ್ತಿಗೆ ಪದ್ಮನಾಭ ರೈ ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರ್, ಪಣಿಯಾಡಿ ಪ್ರಶಸ್ತಿಯ ಸಂಚಾಲಕರಾದ ತಾರಾ ಯು. ಆಚಾರ್ಯ ತಿಳಿಸಿದ್ದಾರೆ.
ರೂಪಕಲಾ ಆಳ್ವ ಕರಂಗಲ್ಪಾಡಿ :
ಇವರು ತುಳು ಮತ್ತು ಕನ್ನಡದ ಬರಹಗಾರ್ತಿ, ಭಾರತ ಸರ್ಕಾರದ ನೆಹರು ಯುವ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಕಾರ್ಯಕರ್ತೆ ಹಾಗೂ ಮಂಗಳೂರು ಸಂದೇಶ ಪ್ರತಿಷ್ಠಾನದಲ್ಲಿ ಜಾನಪದ ಸಂಶೋಧಕಿಯಾಗಿದ್ದಾರೆ.
ಇವರು ‘ನಾಟಿ’, ‘ಜೋಳಿಗೆಯಿಂದ ಹೋಳಿಗೆ’, ‘ಪಂಪ ಪ್ರಶಸ್ತಿ ಪಡೆಯಿನ ಕಯ್ಯಾರ ಕಿಞ್ಞಣ್ಣ ರೈ’, ‘ಪಡಿಪ್ಪಿರೆ’, ‘ತುಳು ರಂಗಭೂಮಿದ ಪುಗರ್ತೆದ ಹಾಸ್ಯ ನಟೆ ಆನಂದ ಬೋಳಾರ್’ ಎನ್ನುವ 5 ಕೃತಿಗಳನ್ನು ರಚಿಸಿದ್ದಾರೆ.
ಇವರ ‘ಜೋಳಿಗೆಯಿಂದ ಹೋಳಿಗೆ’ ಕೃತಿಗೆ ಸಾರಾ ಅಬೂಬಕರ್ ಸಾಹಿತ್ಯ ಪ್ರಶಸ್ತಿ ಹಾಗೂ ‘ಪಡಿಪ್ಪಿರೆ’ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಮಂಗಳೂರು ನಗರ ಗ್ರಂಥಾಲಯ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯೆಯಾಗಿ, ಲೇಖಕಿಯರ ವಾಚಕಿಯರ ಸಂಘ, ಮಹಿಳಾ ಸಭಾ, ಭಗಿನಿ ಸಮಾಜ, ರಾಗ ತರಂಗ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.