ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-95’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ದ ಏಳನೇ ದಿನದ ಕಾರ್ಯಕ್ರಮ ದಿನಾಂಕ 01 ಜನವರಿ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲಾಪೋಷಕ ಕೋಟ ಗಣಪತಿ ಟಿ. ಶ್ರೀಯಾನರನ್ನು ಅಭಿನಂದಿಸಿ ಮಾತನಾಡಿದ ಬನ್ನೂರು ಶಾರದಾ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಶೆಟ್ಟಿ ‘ನಾಟಕಾಷ್ಟಕದ ಈವರೆಗಿನ ನಾಟಕಗಳು ಭಿನ್ನ ಭಿನ್ನವಾಗಿ ರಂಗದಲ್ಲಿ ಕಂಡವು. ವೃತ್ತಿಪರ ಕಲಾವಿದರನ್ನೂ ಮೀರಿಸುವಂತಹ ರಂಗ ಪ್ರಸ್ತುತಿ ಕೆಲವು ಮಕ್ಕಳ ರಂಗಭೂಮಿಯ ನಾಟಕಗಳಲ್ಲಾದವು. ತೆಕ್ಕಟ್ಟೆ ಭಾಗದಲ್ಲಿ ರಂಗಭೂಮಿಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಹೆಗ್ಗಳಿಕೆ ಈ ಸಂಸ್ಥೆಯದ್ದು. ಈ ಸಂದರ್ಭವನ್ನು ನೆಪ ಮಾಡಿಕೊಂಡು ಕಲಾ ಪೋಷಕರನ್ನು ಗುರುತಿಸಿ, ಗೌರವಿಸಿದ ಚುಟುಕು ಸಭಾ ಕಾರ್ಯಕ್ರಮ ಇತರರಿಗೆ ಮಾರ್ಗದರ್ಶನವಾಗಿದೆ.” ಎಂದರು.
ಎಸ್. ಎಮ್. ಎಸ್. ಕಾಲೇಜಿನ ಪ್ರಾಂಶುಪಾಲರಾದ ಅಭಿಲಾಷ ಸೋಮಯಾಜಿ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ, ಗಣೇಶ್ ಕೊಮೆ, ಸಾತ್ಯಕಿ ಪಂಜಿಗಾರು, ರಾಹುಲ್ ಅಮೀನ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಸ್. ಎಮ್. ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ಪಂಜರ ಶಾಲೆ’ ನಾಟಕ ಪ್ರಸ್ತುತಿಗೊಂಡಿತು.