ಪಂಜೆಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ 22ಫೆಬ್ರವರಿ 1874ರಂದು ಜನಿಸಿದರು. ತಂದೆ ರಾಮಪ್ಪಯ್ಯ, ತಾಯಿ ಶಾಂತಾದುರ್ಗಾ ಅಥವಾ ಸೀತಮ್ಮ, ಸರಳಜೀವಿಗಳು, ದೈವಭಕ್ತರು, ಶೀಲವಂತರು, ಬಡಕುಟುಂಬದ ಪಂಜೆಮಂಗೇಶರಾಯರು ಶ್ರಮವಹಿಸಿ ಬಿ.ಎ. ಪದವೀಧರರಾದರು. ಸೈದಾಪೇಟೆಯ ತರಬೇತಿ ಕಾಲೇಜಿನಲ್ಲಿ ಎಲ್.ಟಿ. ಪಾಸು ಮಾಡಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. ಅನಂತರ ಮಂಗಳೂರಿನ ಸಬ್ ಅಸಿಸ್ಟೆಂಟ್ ಶಾಲಾ ಇನ್‌ಸ್ಪೆಕ್ಟರರಾಗಿ, ಕೊಡಗಿನಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ, ಮಡಕೇರಿ ಸೆಂಟ್ರಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸಮಾಡಿದರು.
‘ಮಕ್ಕಳ ಸಾಹಿತ್ಯ ಪಿತಾಮಹ’ರೆನಿಸಿಕೊಂಡಿದ್ದ ಇವರು ಸಣ್ಣಕಥೆ, ಕಥನಕವನ, ಹರಟೆ ಮುಂತಾದ ಕ್ಷೇತ್ರಗಳಲ್ಲಿ ಸಾಹಿತ್ಯ ಕೈಂಕರ್ಯ ಮಾಡಿದ್ದಾರೆ. ಮಂಗಳೂರಿನಲ್ಲಿ ಆರಂಭವಾದ ‘ಸುಹಾಸಿನಿ’ ಪತ್ರಿಕೆ ಇವರ ಸಾಹಿತ್ಯ ಕೆಲಸಕ್ಕೆ ಇಂಬುಕೊಟ್ಟಿತು. ಈ ಪತ್ರಿಕೆಯಲ್ಲಿ ಇವರು ಬರೆದ ‘ನನ್ನ ಚಿಕ್ಕ ತಂದೆ, ಕಮಲಾಪುರದ ಹೊಟ್ಟಿನಲ್ಲಿ’ ಮುಂತಾದ ಸರಸ, ವಿನೋದದ ಕಥೆಗಳು, ಮೃಥುಲಾ, ದುರ್ಗಾವತಿ ಮುಂತಾದ ಐತಿಹಾಸಿಕ ಕಥೆಗಳೂ ಪ್ರಕಟವಾಯಿತು. ಬ್ರಿಟಿಷ್ ವಸಾಹತುಶಾಹಿಗೆ ಬಹಳ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಕವಿಗಳಲ್ಲಿ ಪಂಜೆಯವರೂ ಒಬ್ಬರು. ಅವರ ನಾಗರಹಾವೆ ಹಾವೊಳು ಹೂವೆ, ತಂಕಣಗಾಳಿಯಾಟ ಈ ಹಿನ್ನೆಲೆಯಲ್ಲಿ ಮುಖ್ಯ ರಚನೆಗಳು. ಪಂಜೆಯವರು ಭಾಷೆಯನ್ನು ಸಹಜಗತಿಯಲ್ಲಿ ಬಳಸುವ ಪ್ರಯತ್ನಮಾಡಿದ್ದಾರೆ. ಹುತ್ತರಿ ಹಾಡು ಕೊಡವರ ಜೀವನವನ್ನು ಕುರಿತು ಬರೆದದ್ದು. ಇದು ಕೊಡಗಿನ ರಾಷ್ಟ್ರಗೀತೆಯಂತಿದೆ. ತುಳು ಜಾನಪದದಿಂದ ಆಯ್ದುಕೊಂಡು ಬರೆದ ಕೋಟಿ ಚೆನ್ನಯ್ಯ ಒಳ್ಳೆಯ ಕೃತಿ.
ಮಕ್ಕಳ ಸಾಹಿತ್ಯದಲ್ಲಿ ಅಜ್ಜಿ ಸಾಕಿದ ಮಗ, ಇಲಿಗಳ ಥಕಥೈ, ಕೊ ಕ್ಕೊ ಕೋ ಕೋಳಿ, ಗುಡುಗುಡು ಗುಮ್ಮಟದೇವ, ಬೊಕ್ಕಬಾಯಿ ಕೊಕ್ಕರಾಜ, ಮಾತಾಡೋ ರಾಮಪ್ಪ, ಮೂರು ಕರಡಿಗಳು ಇವು ಪ್ರಮುಖ ಕೃತಿಗಳು, ಸಾಹಿತ್ಯ ಪ್ರಕಟಣೆಗೆಂದೇ ಇವರು 1921ರಲ್ಲಿ ಮಂಗಳೂರಿನಲ್ಲಿ “ಬಾಲ ಸಾಹಿತ್ಯ ಮಂಡಲ” ಎಂಬ ಸಂಸ್ಥೆ ಸ್ಥಾಪಿಸಿದರು. 1927ರಲ್ಲಿ ಪಂಚಕಜ್ಜಾಯ ಎಂಬ ಹೆಸರಿನಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾದವು.
ಆರಂಭದ ದಿನಗಳಲ್ಲಿ ಪಂಜೆಯವರು ಬೇರೆ ಬೇರೆ ಕಾವ್ಯನಾಮಗಳಲ್ಲಿ ಹರಟೆಯ ಮಲ್ಲ, ರಾ.ಮ.ಪಂ. ಕವಿಶಿಷ್ಯ-ಎಂಬ ಹೆಸರುಗಳಲ್ಲಿ ತಮ್ಮ ಕೃತಿಗಳನ್ನು ಮಂಗಳೂರಿನ ಸುಹಾಸಿನಿ ಮತ್ತು ಸತ್ಯದೀಪಿಕೆ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಮಕ್ಕಳ ಶಿಕ್ಷಣ ವಿಚಾರದಲ್ಲಿ ಪಂಜೆಯವರ ದೃಷ್ಟಿ ಆಧುನಿಕವಾಗಿತ್ತು. ಆಟ, ಪಾಠ, ಕುಣಿತ, ಚಿತ್ರ, ಸಂಗೀತ ಇದರ ಸಹಾಯದಿಂದ ಮಕ್ಕಳಿಗೆ ವಿದ್ಯೆ ಕಲಿಸುವುದರಲ್ಲಿ ಅವರ ಆಸಕ್ತಿಯಿತ್ತು. ಪಂಜೆಯವರು ಆಧುನಿಕ ಕನ್ನಡ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದರು. ಹಳ್ಳಿಗಾಡಿನ ಜಾನಪದ ಸಾಹಿತ್ಯ, ತುಳು, ಕನ್ನಡ, ಕೊಂಕಣಿ ಅದು ಯಾವುದೇ ಭಾಷೆಯದ್ದಾಗಿರಲಿ ಶ್ರದ್ದೆಯಿಂದ ಸಂಗ್ರಹಿಸುತ್ತಿದ್ದರು. ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ಅಭ್ಯಾಸ ಸಮಿತಿಯ ಸದಸ್ಯರಾಗಿದ್ದರು. ಅನೇಕ ಹಳಗನ್ನಡ ಕಾವ್ಯಗಳು ಪಠ್ಯಪುಸ್ತಕವಾಗುವಂತೆ ಶ್ರಮಿಸಿದರು. ಪಂಜೆಯವರು ಕವಿ, ಕಥೆಗಾರ, ಹಾಸ್ಯಪಟು, ಶಿಕ್ಷಣತಜ್ಞ ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.
ಪಂಜೆ ಮಂಗೇಶರಾಯರನ್ನು ಸಮೀಪದಿಂದ ಆದರದಿಂದ ಕಂಡಿದ್ದ ಸೇಡಿಯಾಪು ಕೃಷ್ಣಭಟ್ಟರು ಹೀಗೆ ಹೇಳಿದ್ದಾರೆ. “ಪಂಜೆಯವರು ಕಥೆ, ಕವನಗಳನ್ನು ಬರೆಯುವ ಕಸುಬು ಮಾಡಿದವರಲ್ಲ. ಬರೆಯಬೇಕೆಂಬ ಅಂತಃಪ್ರೇರಣೆ ಒತ್ತೊತ್ತಿ ಬಂದಾಗ ಮಾತ್ರ ಬರೆದವರು. ಆಗ ಕೂಡ ಬಹಳ ಸಂಯಮದಿಂದ ಬರೆದವರು… ಪಂಜೆಯವರು ಇಂಗ್ಲಿಷಿನಲ್ಲಿ ವಿದ್ವಾಂಸರೇ ಆಗಿದ್ದರೂ ಆ ಸಾಹಿತ್ಯವನ್ನು ಸವಿದು ಮೆಚ್ಚಿ ನಲಿದವರೇ ಆದರೂ, ಅವರು ಬರೆದುದಲ್ಲ ಇಂಗ್ಲಿಷ್ ಕಲಿಯದವರಿಗಾಗಿ, ಕೇವಲ ಕನ್ನಡವನ್ನು ಬಲ್ಲ ಸಾಮಾನ್ಯರ ಸಂತೋಷಕ್ಕಾಗಿ, ಹೃದಯ ಸಂಸ್ಕಾರಕ್ಕಾಗಿ” – ಪಂಜೆಯವರ ನಾಡುನುಡಿಗಳ, ಸಾಹಿತ್ಯದ ಸೇವೆಯನ್ನು ಗಮನಿಸಿದ ಜನತೆ 1934ರಲ್ಲಿ ರಾಯಚೂರಿನಲ್ಲಿ ನಡೆದ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆರಿಸಿ ಗೌರವಿಸಿತು. ಇವರು ನ್ಯುಮೋನಿಯಾಕ್ಕೆ ತುತ್ತಾಗಿ 25-10-1937ರಲ್ಲಿ ನಿಧನರಾದರು. ಇವರ ಜನ್ಮಶತಾಬ್ಬಿಯ ಅಂಗವಾಗಿ ಅವರ ಸಮುದ್ರ ಬರಹಗಳನ್ನು ಮೂರು ಸಂಪುಟಗಳಲ್ಲಿ ಓರಿಯಂಟಲ್ ಲಾಂಗ್ಮನ್’ ಸಂಸ್ಥೆ ಪ್ರಕಟಿಸಿದ್ದಾರೆ. ಪಂಜೆಯವರ ಹುಟ್ಟೂರು ಬಂಟವಾಳದಲ್ಲಿ ಒಂದು ಸ್ಮಾರಕ, ಮಂಗಳೂರು ರಸ್ತೆಯೊಂದಕ್ಕೆ ಅವರ ನಾಮಕರಣ, ಇವು ಈ ಸಂದರ್ಭದಲ್ಲಿ ನಡೆದವು. ಪಂಜೆ ಮಂಗೇಶರಾಯರ ಸ್ಮರಣೆ ಕನ್ನಡಿಗರ ಹೃದಯದಲ್ಲಿ ಅನುದಿನವೂ ನಡೆಯುವಂಥದು.