ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ’ಯು ದಿನಾಂಕ 20 ಫೆಬ್ರವರಿ 2025ರಂದು ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಕ್ತಿ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ “ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದರು ಎಂಬುದೇ ಕೊಡಗಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹೀಗಿರುವಾಗ ಪಂಜೆ ಮಂಗೇಶರಾಯರ ಸಾಹಿತ್ಯ ಲೋಕದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ರೀತಿಯಲ್ಲಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಪಾಠ ಮಾಡುತ್ತಿದ್ದ ತರಗತಿಯನ್ನು ಪಂಜೆಯವರ ಹೆಸರಿನಲ್ಲಿ ಗುರುತಿಸಿ, ಉತ್ತಮ ಕೃತಿಗಳ ಗ್ರಂಥಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಪಂಜೆಯವರ ನೆನಪನ್ನು ಚಿರಸ್ಥಾಯಿಯಾಗಿಸಬೇಕು. ಅಂತೆಯೇ, ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂಜೆ ಮಂಗೇಶರಾಯರ ಪುತ್ತಳಿಯನ್ನು ಸ್ಥಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡೊಳ್ಳು ಬಾರಿಸಿ ಉದ್ಘಾಟಿಸಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, “ಕವಿಶಿಷ್ಯ ಎಂಬ ಹೆಸರಿನಿಂದ ಅನೇಕ ಸಾಹಿತ್ಯ, ಲೇಖನ, ಕವಿತೆಗಳನ್ನು ಬರೆಯುವ ಮೂಲಕ ಕವಿ ಋಷಿಯಾಗಿದ್ದ ಪಂಜೆ ಮಂಗೇಶರಾಯರು ನಿಜವಾದ ಅರ್ಥದಲ್ಲಿ ಕವಿಗುರುವಿನಂತೆ ಇದ್ದರು. ಕೊಡಗಿನ ಕುರಿತಾದ ‘ಎಲ್ಲಿ ಭೂರಮೆ’ಯಂಥ ಪದ್ಯದ ಮೂಲಕ ಇಡೀ ಜಗತ್ತೇ ಕೊಡಗನ್ನು ಹಾಡಿನ ಮೂಲಕ ಗುರುತಿಸುವಂತೆ ಮಾಡಿದ್ದರು. ಕೇರಳ ಪ್ರವಾಸೋದ್ಯಮ ಇಲಾಖೆಯು ದೇವರ ನಾಡು ಎಂದು ಬಿಂಬಿಸಿಕೊಳ್ಳುತ್ತಿದೆಯಾದರೂ 1923ರಲ್ಲಿಯೇ ಪಂಜೆಯವರು ಕೊಡಗನ್ನು ಭೂರಮೆ ದೇವನ ಸನ್ನಿಧಿ ಬಯಸಿ ಭಿಮ್ಮನೆ ಬಂದ ನಾಡೆಂದು ವರ್ಣಿಸಿದ್ದರು. ಮಡಿಕೇರಿಗೆ ಮುಖ್ಯೋಪಾಧ್ಯಾಯರಾಗಿ ಕರ್ತವ್ಯಕ್ಕೆ ಬಂದ ಮೊದಲ ಭಾರತೀಯ ಮುಖ್ಯೋಪಾಧ್ಯಾಯರಾಗಿದ್ದ ಪಂಜೆಯವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ವಾಗತ ದೊರಕಲಿಲ್ಲ. ಯುರೋಪಿಯನ್ ಮುಖ್ಯೋಪಾಧ್ಯಾಯರನ್ನೇ ಬಯಸಿದ್ದ ಶಿಕ್ಷಕ ವೃಂದ ಪಂಜೆಯವರನ್ನು ಹತ್ತಿರಕ್ಕೆ ಸೇರಿಸಿರಲಿಲ್ಲ. ಹೀಗಿದ್ದರೂ ಬೇಸರಿಸಿಕೊಳ್ಳದೇ, ಕಾಲಕ್ರಮೇಣ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಕೊಡಗಿನ ಜನತೆ ಇಂದಿಗೂ ತಮ್ಮ ನಾಡಗೀತೆಯಂತೆ ಸ್ವೀಕರಿಸಿರುವ ಹುತ್ತರಿ ಹಾಡನ್ನು ಪಂಜೆಯವರು ಬರೆದರು” ಎಂದು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಘಟಕದ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, “ಮಡಿಕೇರಿಯ ಜ್ಯೂನಿಯನ್ ಕಾಲೇಜು ರಸ್ತೆಗೆ ಮತ್ತೊಮ್ಮೆ ಕ.ಸಾ.ಪ. ವತಿಯಿಂದ ಪಂಜೆ ಮಂಗೇಶರಾಯರ ಹೆಸರಿನ ನಾಮಫಲಕವನ್ನು ಲೋಕಾರ್ಪಣೆ ಮಾಡಲಾಗಿದ್ದು, ಅಂತೆಯೇ ವಿವಿಧ ಶಾಲಾ ಕಾಲೇಜುಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿಲಾಗಿದೆ. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಿಸಲಾಗಿದ್ದ ಪಂಜೆ ಮಂಗೇಶರಾಯರ ಕೃತಿಗಳನ್ನು ಮರುಮುದ್ರಣ ಮಾಡುವಂತೆಯೂ ಕ.ಸಾ.ಪ.ಕ್ಕೆ ಸಲಹೆ ನೀಡಿದರು”.
ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪ್ರದಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಸಹಕಾರ್ಯದರ್ಶಿ ಜಲಜಾ ಶೇಖರ್, ಸಹಕಾಯದರ್ಶಿ ಎ.ವಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಆರ್.ಪಿ. ಚಂದ್ರಶೇಖರ್, ಕೆ.ಎನ್. ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ದೊಡ್ಡಗೌಡ, ಪ್ರೌಡಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಡಿ. ಶಿವಶಂಕರ್, ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಜಗದೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ವರ ಪ್ರಸನ್ನ, ಪ.ಪೂ. ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ, ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಸರ್ಕಾರಿ ಪ್ರೌಡಶಾಲೆಯ ಮುಖ್ಯೋಪಾದ್ಯಾಯಿನಿ ಕೆ.ವಿ. ಶಶಿಕಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹೆಚ್.ಕೆ. ಸುಶೀಲಾ, ವೇದಿಕೆಯಲ್ಲಿದ್ದರು. ಡಾ. ಕಾವೇರಿ ಪ್ರಕಾಶ್ ನಿರೂಪಿಸಿ, ಮೆ.ನಾ. ವೆಂಕಟನಾಯಕ ಸ್ವಾಗತಿಸಿದ ಕಾರ್ಯಕ್ರಮವನ್ನು ಈರಮಂಡ ಹರಿಣಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಪಿ.ಎಸ್. ಸಬಾಸ್ಟಿನ್ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಜಲಜಾ ಶೇಖರ್ ರವರ ‘ಅಗ್ನಿಕುಂಡ’ ಕಥಾ ಸಂಕಲನ ಮತ್ತು ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯರವರ ‘ಮುಕ್ತಕ ಮಾಣಿಕ್ಯ’ ಕೃತಿಗಳು ಲೋಕಾರ್ಪಣೆಗೊಂಡವು. ಚಿತ್ರ ಕಲಾವಿದ ಬಿ.ಆರ್. ಸತೀಶ್ ಮತ್ತು ತಂಡದವರಿಂದ ಕುಂಚ ಗಾಯನ, ಪಂಜೆ ಮಂಗೇಶರಾಯರ ಪ್ರಸಿದ್ಧ ಹಾಡುಗಳನ್ನು ಆಧರಿಸಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರಗೊಂಡವು.