ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯ ಕೃಷಿಯ ಮೂಲಕ ಶಾಶ್ವತ ಸ್ಥಾನ ಪಡೆದ, ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ತಮ್ಮ ಹುತ್ತರಿ ಹಾಡಿನ ಮೂಲಕ ಕಟ್ಟಿಕೊಟ್ಟ ಹಿರಿಯ ಚೇತನ ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ’ಯು ದಿನಾಂಕ 20 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂರ್ತ ಗೌಡ ಇವರು ಸಾಹಿತಿ ಜಲಜಾ ಶೇಖರ್ ರವರ ‘ಅಗ್ನಿಕುಂಡ’ ಕಥಾ ಸಂಕಲನ ಮತ್ತು ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯರವರ ‘ಮುಕ್ತಕ ಮಾಣಿಕ್ಯ’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಚಿತ್ರ ಕಲಾವಿದ ಬಿ.ಆರ್. ಸತೀಶ್ ಮತ್ತು ತಂಡದವರಿಂದ ಕುಂಚ ಗಾಯನ ನಡೆಯಲಿದೆ.
ಅಪರಾಹ್ನ 12.30 ಗಂಟೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮತ್ತು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್. ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ‘ಪಂಜೆಯವರ ಬದುಕು-ಬರಹ’ ಎಂಬ ವಿಷಯಗಳ ಬಗ್ಗೆ ನಿವೃತ್ತ ಸಹ ಕಾರ್ಯದರ್ಶಿ ಡಾ. ಎಸ್.ಪಿ. ಮಹಾಲಿಂಗೇಶ್ವರ, ‘ಸಂಶೋಧನಾ ನೆಲೆಯಲ್ಲಿ ಪಂಜೆ’ ಎಂಬ ವಿಷಯಗಳ ಬಗ್ಗೆ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ‘ಪಂಜೆಯವರ ಶಿಶು ಸಾಹಿತ್ಯ’ ಎಂಬ ವಿಷಯಗಳ ಬಗ್ಗೆ ಸಾಹಿತಿ ಡಾ. ಕಮಲಾಕ್ಷ ಕೆ. ಇವರುಗಳು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 4-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಂಜೆಯವರು ರಚಿಸಿದ ಗೀತೆಗಳಿಗೆ ಗಾಯನ ಮತ್ತು ನೃತ್ಯ ರೂಪಕ ಪ್ರಸ್ತುತಗೊಳ್ಳಲಿದೆ.