ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಪಂಕಜಶ್ರೀ ಪ್ರಶಸ್ತಿ’ಗೆ ಮುಂಬೈನ ಕಥೆಗಾರ್ತಿ ಮಿತ್ರಾ ವೆಂಕಟ್ರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕನ್ನಡದ ಪ್ರಮುಖ ಲೇಖಕಿಯಾಗಿದ್ದ ಎ.ಪಂಕಜ ‘ಅನುರಾಗ ಬಂಧನ’, ‘ನಾದಭಂಗ’’, ಸುಖಸ್ವಪ್ನ’ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ‘ಊರ್ಮಿಳಾ’ ಇವರ ಪ್ರಸಿದ್ಧ ನಾಟಕ. ಇವರ ‘ಕಾಗದದ ದೋಣಿ’ ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪುರಸ್ಕಾರವನ್ನು ಪಡೆದಿತ್ತು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಗೌರವದಿಂದ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಲೇಖಕಿಯರಿಗೆ ಪ್ರತಿ ವರ್ಷ ಪುರಸ್ಕಾರ ನೀಡುವಂತೆ ನಿಯಮವನ್ನು ರೂಪಿಸಿದ್ದಾರೆ.
2025ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಿತ್ರಾ ವೆಂಕಟ್ರಾಜ್ ಕುಂದಾಪುರ ಮೂಲದವರು. ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ ನಂತರವೇ ಅವರ ಸಾಹಿತ್ಯ ಸೇವೆ ತೀವ್ರತೆಯನ್ನು ಪಡೆದು ಕೊಂಡಿತು. ಕನ್ನಡದ ಮಹತ್ವದ ಕಥೆಗಾರ್ತಿಯರಲ್ಲಿ ಒಬ್ಬರು ಎನ್ನಿಸಿ ಕೊಂಡಿರುವ ಇವರು ‘ರುಕುಮಾಯಿ’, ‘ಹಕ್ಕಿ ಮತ್ತು ಅವಳು’, ‘ಮಾಯಕದ ಸತ್ಯ’ ಮತ್ತು ‘ನನ್ನಕ್ಕ ನಿಲೂಫರ್’ ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಪಾಚಿ ಕಟ್ಟಿದ ಪಗಾರ’ ಇವರ ಕಾದಂಬರಿ, ಅನುವಾದ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವ ಇವರಿಗೆ ಹಲವಾರು ಪುರಸ್ಕಾರಗಳು ಲಭಿಸಿದ್ದು, ಇವರ ಕೃತಿಗಳು ಪಠ್ಯಗಳೂ ಕೂಡ ಆಗಿವೆ.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕಶವಾಗಿ ಪರಿಶೀಲಿಸಿ ಮಿತ್ರಾ ವೆಂಕಟ್ರಾಜು ಅವರನ್ನು ಆಯ್ಕೆ ಮಾಡಿದೆ. ಈ ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು , ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಹಾಜರಿದ್ದರು.