ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ನೆಯ ಸಾಲಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಪತ್ರಕರ್ತೆ ಹಾಗೂ ಲೇಖಕಿ ಶ್ರೀಮತಿ ಶೋಭಾ ಹೆಚ್.ಜಿ. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಹಿರಿಯ ಸಾಹಿತಿ ಶ್ರೀಮತಿ ಎ. ಪಂಕಜ ಅವರು ಸ್ಥಾಪಿಸಿರುವ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಯು 10,೦೦೦ (ಹತ್ತು ಸಾವಿರ)ರೂ. ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ. 35 ವರ್ಷ ಮೇಲ್ಪಟ್ಟ ಮಹಿಳಾ ಸಾಹಿತಿಗಳಿಗೆ ಮೀಸಲಿರುವ ಈ ಪ್ರಶಸ್ತಿಯನ್ನು ಇದುವರೆಗೆ 9 ಜನ ಮಹಿಳಾ ಸಾಹಿತಿಗಳಿಗೆ ಪ್ರಧಾನ ಮಾಡಲಾಗಿದೆ. ಈ ಬಾರಿ ನೀಡಲಾಗುತ್ತಿರುವ 2022ನೆಯ ಸಾಲಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗಾಗಿ ಶೋಭಾ ಹೆಚ್.ಜಿ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಸ್ತುತ ದತ್ತಿ ಪ್ರಶಸ್ತಿಗೆ ಆಯ್ಕೆಯಾಯಾಗಿರುವ ಪತ್ರಕರ್ತೆ ಹಾಗೂ ಲೇಖಕಿ ಶ್ರೀಮತಿ ಶೋಭಾ ಹೆಚ್.ಜಿ. ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ. ಇವರು ಕನ್ನಡ ನಾಡು ನುಡಿಯ ಕುರಿತು ಮಾಡುತ್ತಿರುವ ಸೇವೆ ನಿರಂತರವಾಗಿರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಶಿಸುತ್ತದೆ. ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ ಆಯ್ಕೆಯಲ್ಲಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
- ಶ್ರೀನಾಥ್ ಜೆ., ಮಾಧ್ಯಮ ಸಲಹೆಗಾರರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು