ಹಿರಿಯ ಸಾಧಕರ ಮನೆಗೇ ಹೋಗಿ ಗೌರವಿಸುವ ಪರಿಪಾಠ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸತಲ್ಲ. ಈಗಾಗಲೇ ಹದಿನೇಳರ ಸಂಖ್ಯೆ ದಾಟಿದೆ. ನಾಲ್ಕೈದು ಸಂದರ್ಭಗಳಲ್ಲಿ ಅಧ್ಯಕ್ಷ ಡಾl ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರೊಂದಿಗೆ ನಾನೂ ಇದ್ದೆ.
ಮೊನ್ನೆ ಹೋದದ್ದು ಬಾಯಾರಿನ ಪೊಸಡಿಗುಂಪೆಯ ಶಶಿಕಲಾ ಬಾಯಾರು ಎಂಬ ಗೃಹಿಣಿಯ ಭೇಟಿಗಾಗಿ. ಆಕೆ ಬರೆಹಗಾರ್ತಿ ಮತ್ತು ಕಸೂತಿ ಪ್ರವೀಣೆ.
ದೊಡ್ಡ ಮಳೆ ಬಂದು ಸುರಿಯುವ ಮೊದಲು ನಮ್ಮ ಪ್ರಯಾಣ ಸುಪ್ರಸಿದ್ಧ ಮಠವನ್ನು ದಾಟಿ ಗೂಗಲ್ ಕೂಡ ಕಂಡಿರದ ದಾರಿಯಲ್ಲಿ ಸುತ್ತಿ ಸುತ್ತಿ ಸಾಗಿತು. ಹೆಚ್ಚುಕಡಿಮೆ ಗಾಂಪ ಸ್ವರೂಪಿಗಳಾದ ನಮಗೆ ಜಯಪ್ರಕಾಶರ ಕಾರೇ ಆಸರೆ. ಸಂಜೆ ಐದಕ್ಕೇ ಆತಂಕಕಾರಿ ಸಂಜೆಗತ್ತಲು. ಹಳ್ಳಿಯ ಸಾದಾ ವೇಷದಲ್ಲಿ ಮನೆಯವರಿಂದ ಸ್ವಾಗತವಂತೂ ಸಿಕ್ಕಿತು.
ತನ್ನ ಮೂವತ್ತರ ಹರೆಯದಿಂದಲೇ ಕಸೂತಿಯನ್ನು ಅಭ್ಯಸಿಸಲು ತೊಡಗಿದಾಗ ಅವರಿಗೆ ಬೇಕಾದ ಬಟ್ಟೆ ಸಿಗುವುದೇ ಕಷ್ಟವಾಗಿತ್ತು.
ಎಲ್ಲೋ ದೂರದಲ್ಲಿತ್ತು ಬಟ್ಟೆಯಂಗಡಿ. ವರ್ಣಮಯ ಉತ್ತಮ ದರ್ಜೆಯ ನೂಲುಗಳಿಗೆ ಮಂಗಳೂರೇ ಆಶ್ರಯ. ಅವರು ಹೇಳುವಂತೆ ಉನ್ನತ ಶಿಕ್ಷಣ ಕೈತಪ್ಪಿದ ಮೇಲೆ ವಿರಾಮ ಕಾಲಕ್ಕೆ ಈ ಕುಶಲ ಕಲೆ ಆಕರ್ಷಿಸಿದೆ. ” ಗೆದ್ದಲು, ಗೂಡು ಕಟ್ಟುವ ಹಕ್ಕಿಗಳು, ಜೇನನ್ನು ಸಂಗ್ರಹಿಸುವ ಜೇನ್ನೊಣಗಳಂತಹ ಸಾವಿರಾರು ಜಂತು ಜೀವಿಗಳಿರುವ ಪ್ರಕೃತಿಯೇ ಕಲಾವಿದನಿಗೆ ಪಾಠಶಾಲೆ” ಎನ್ನುವ ಅವರ ಕಸೂತಿ ಸೃಷ್ಟಿಗಳು ಕ್ರಮೇಣ ದೇಶವ್ಯಾಪಿ ಹೆಸರಾದುವು.
ಮುಖದ ಹೊಳಹು, ಬಟ್ಟೆಗಳ ವರ್ಣ ವೈವಿಧ್ಯ, ಬೆಳಕು ನೆರಳಿನ ಷೇಡಿಂಗ್ – ಹೀಗೆ ಚಿತ್ರಕಲೆಯ ಸಂಗತಿಗಳನ್ನು ಕಸೂತಿಯಲ್ಲಿ ಪ್ರಯೋಗಿಸಿ ಅವರು ತಪಸ್ಸಿನಂತೆ ದುಡಿದರು. ಸಂಪಾದನೆಗಲ್ಲ- ಪ್ರದರ್ಶನಕ್ಕಷ್ಟೆ ಅವರ ಕೃತಿಗಳು ಸಂದುವು. ಪ್ರಸಿದ್ಧ ಪತ್ರಿಕೆಗಳು ಬಂದು ಅವರ ಸಂದರ್ಶನ ಮಾಡಿ ಪ್ರಚಾರ ಕೊಟ್ಟುವು. ಅವರ ಪ್ರಯೋಗಶೀಲತೆಗೆ ಮನುಷ್ಯ ಮುಖದ ಸುಕ್ಕು, ಕೂದಲಿನ ಸೂಕ್ಷ್ಮ ಚಲನೆ, ಉಡುಪು ತೊಡುಪುಗಳ ಸೌಂದರ್ಯ ಹೊರತು ಅನ್ನಿಸದೆ ದೂರಕ್ಕೆ ವರ್ಣಚಿತ್ರದ ಹಾಗೆ, ಹತ್ತಿರಕ್ಕೆ ಅತಿ ಸೂಕ್ಷ್ಮ ಹೊಲಿಗೆಗಳು ರಂಜಿಸಿದುವು.
ಎಪ್ಪತ್ತು ಮೀರಿದ ಶಶಿಕಲಾ ತುಂಬ ತಡವಾಗಿ ಸಣ್ಣ ಕತೆಗಳನ್ನು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇನ್ನೂ ಮುದ್ರಿಸದ ನೀಳ್ಗತೆಗಳು ಪ್ರಕಟಣೆಗೆ ಸಿದ್ಧವಾಗಿವೆ. ಚಿಂತನ ಕಾರ್ಯಕ್ರಮ ಅಂಕಣ ಬರೆಹಗಳಿಗೂ ಅವರ ಲೇಖನಿ ಪ್ರಸಿದ್ಧ. “ಪತ್ರಾರ್ಜಿತ” ಹೆಸರಲ್ಲಿ ಅವರು ಬರೆದ ಅಂಕಣ ಬರಹಗಳು ಪುಸ್ತಕವಾಗಿ ಬೆಳಕು ಕಂಡಿವೆ.
ಕೃಷ್ಣನಾ ಕೊಳಲಿನಾ ಕರೆ “
ಪೆರ್ಲ ಕೃಷ್ಣ ಭಟ್ಟರ ಸುಪುತ್ರಿ ಶ್ರೀಮತಿ ಶಶಿಕಲಾ ಅವರ ಪತಿ ದಿ. ಶ್ರೀಪತಿ ಭಟ್. ಈಗ ಶಶಿಕಲಾ ಅವರು ಅವಿಭಕ್ತ ಕುಟುಂಬದ ಹಿರಿಯ ಜೀವ. ಅವರ ಮನೆಯ ಮಾಳಿಗೆಯಲ್ಲೂ ಬಲಬದಿ ಪಡಸಾಲೆಯಲ್ಲೂ ನಾವು ಅದ್ಭುತವೊಂದನ್ನು ಕಂಡೆವು. ಕೃಷ್ಣ ರಾಜ ಎಂಬ ಅವರ ಮೈದುನ ನಮ್ಮನ್ನು ಮಾಳಿಗೆಗೆ ಕರೆದರು. ಅಲ್ಲಿ ಹತ್ತುಸಾವಿರ ಸಂಖ್ಯೆಯ ಬಿದಿರಿನ ರಾಶಿ ಇತ್ತು. ಇಪ್ಪತ್ತು ವರ್ಷದಿಂದ ಅವುಗಳಿಂದ ಕೊಳಲುಗಳನ್ನು ತಯಾರಿಸುತ್ತಿದ್ದಾರೆ!
ವಾಯಲಿನ್ ಕಲಿತಿದ್ದೂ ಸಂಗೀತಾಭ್ಯಾಸ ಮುಂದುವರಿಸುವುದಕ್ಕೆ. ಅವರಿಗೆ ಸಮಯ ಇಲ್ಲ. ಅದಕ್ಕೆಷ್ಟು ಬಗೆಯ ಪರಿಕರಗಳು! ಜೊತೆಯಾಗಿ ಮಗ ಆಶಯನೂ ದುಡಿಯುತ್ತಾನೆ. ಈತ ಸೊಲ್ಲಾಪುರದಲ್ಲಿ ಮ್ಯೂಸಿಕ್ ಎಂ. ಎ. ಯಲ್ಲಿ ಪ್ರಥಮ ರ್ಯಾಂಕ್ ಪಡೆದು ಈ ಕೆಲಸ ಅಭ್ಯಸಿಸುತ್ತಿದ್ದಾನೆ. ಅವನ ಅಧ್ಯಯನದ ವಿಷಯ ತಬಲಾ. ಅದರ ನಿರ್ಮಾಣವೂ ಅವನಿಗೆ ಕರಗತ. ಪ್ರಥಮ ಪುತ್ರ ಹರ್ಷ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಇದೇ ಕೊಳಲಿನ ತಯಾರಿಯಲ್ಲಿ ನಿರತರಾಗಿದ್ದರೆ ದ್ವಿತೀಯ ಪುತ್ರ ಚಿನ್ಮಯಕೃಷ್ಣ ಕೃಷ್ಣರಾಜರಿಗೆ ಸಾಥಿಯಾಗಿ ಇದ್ದಾರೆ. ಇನ್ನೂ ಕೆಲವರಿಗೆ ಕೃಷ್ಣರಾಜರ ಕೊಳಲ ಉದ್ಯಮ ಕೆಲಸ ಕೊಟ್ಟಿದೆ.
ಬಾಯಾರಿನಿಂದ ಕೊಳಲುಗಳು ದೇಶದ ಉದ್ದಗಲಕ್ಕೆ ಸಂಚರಿಸಿ ಮಾರಾಟವಾಗುತ್ತವೆ. ಸಾವಿರದಿಂದ ಇಪ್ಪತ್ತು ಸಾವಿರ ಬೆಲೆಯೂ ಇದೆ. ಎಲ್ಲಿಯ ಬಿದಿರು! ಯಾರ ನಿರ್ಮಾಣ, ಯಾರಿಂದ ಬಳಕೆ!
ಅನೇಕ ಮಂದಿ ಕಲಾವಿದರು ನಿರ್ಮಾಣ ಶಾಲೆಗೇ ಬಂದು ಆಯ್ಕೆ ಮಾಡಿಕೊಂಡು ಬೇಕಾದ ಸ್ವರಗಳಿಗೆ ಹೊಂದಿಸಿ ಒಯ್ಯುತ್ತಾರಂತೆ.
ಕೇರಳದ ಮೂಲೆ ಮೂಲೆಯಿಂದಲೂ ಇಲ್ಲಿನ ಕೊಳಲುಗಳಿಗೆ ಬೇಡಿಕೆ ಇದೆ ಎನ್ನುವುದು ವಿಶೇಷವೆ.
ಬಿದಿರ ಮೆಳೆ ಗಾಳಿ ಹೊಕ್ಕು ಗಾನಾಲಾಪನೆ ಮಾಡುತ್ತವೆಂದು ನಾವು ಕಾವ್ಯಗಳಲ್ಲಿ ಓದುತ್ತೇವಲ್ಲ. ಬಹುಶಃ ಪ್ರಕೃತಿಯ ಈ ಸೆಳೆತವೇ ಮನುಷ್ಯನನ್ನು ಪ್ರೇರೇಪಿಸಿರಬೇಕು. ೪೫ ಸಾವಿರ ವರ್ಷಗಳ ಹಿಂದೆಯೇ ಕೊಳಲು ಇತ್ತೆಂದು ಚರಿತ್ರೆ ಇದೆ. ಆದರೆ ಅದೆಲ್ಲ ಎಲುಬಿನಲ್ಲಿ ಕೊರೆದದ್ದಂತೆ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಚೀನದಲ್ಲೂ ಆ ನಂತರ ಭಾರತದಲ್ಲೂ ಹೊಸ ರೀತಿಯ ಕೊಳಲು ಬಂತೆಂದೂ ಮಾಹಿತಿ ಸಿಗುತ್ತದೆ. ಒಂದಂತೂ ನಿಜ. ನಮ್ಮದೇಶದಲ್ಲಿ ಗೋವುಗಳಿಗೆ ಕೃಷ್ಣನ ಮೂಲಕ ಕೊಳಲ ವಾದನ ಪ್ರಿಯ. ಇವತ್ತಿಗೂ ಗೋವುಗಳು ಕೊಳಲನಾದವನ್ನು ಕಿವಿ ತುಂಬಿ ಕೇಳುತ್ತವೆ. ಬಹುಶಃ ಅವುಗಳ ಕಣ್ಣುಗಳು ಕೃಷ್ಣನನ್ನು ಹುಡುಕುತ್ತವೆ!
( ಸಂಧ್ಯಾಗೀತ ಬಾಯಾರು, ಶೇಖರ ಶೆಟ್ಟಿ, ವಿಶಾಲಾಕ್ಷ ಪುತ್ರಕಳ, ರವಿಲೋಚನ, ರಾಜಾರಾಮ ರಾವ್ ಮತ್ತು ಕ ಸಾ ಪ ಅಧ್ಯಕ್ಷ ಜಯಪ್ರಕಾಶ್ ಅವರು ಇದ್ದಾರೆ)
ಪ್ರೊ. ಪಿ. ಎನ್. ಮೂಡಿತ್ತಾಯ