ಉಪ್ಪಿನಂಗಡಿ : ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ, ಪಾತಾಳ ಇವರಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡ ಮಾಡುವ ‘ಪಾತಾಳ ಕಲಾ ಮಂಗಳ ಪ್ರಶಸ್ತಿ’ಯನ್ನು ಈ ಬಾರಿ ಶ್ರೀ ಸಂಜಯ್ ಕುಮಾರ್ ಗೋಣಿಬೀಡು, ಶ್ರೀ ಸರವು ರಮೇಶ್ ಭಟ್ ಮತ್ತು ಶ್ರೀ ರಮೇಶ ಕುಲಶೇಖರ ಅವರಿಗೆ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಸಂಸ್ಥಾಪಕ ಪಾತಾಳ ವೆಂಕಟರಮಣ ಭಟ್ ತಿಳಿಸಿದ್ದಾರೆ. ದಿನಾಂಕ 26-04-2024ರಂದು ರಾತ್ರಿ ಉಪ್ಪಿನಂಗಡಿಯ ಪಾತಾಳ ಶ್ರೀ ದುರ್ಗಾಗಿರಿ ಭಜನಾ ಮಂದಿರದಲ್ಲಿ ಸುಂಕದಕಟ್ಟೆ ಮೇಳದ ವೇದಿಕೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಕೆ. ಶ್ರೀಪತಿ ಭಟ್ ಮೂಡಬಿದ್ರೆ, ಶ್ರೀ ಜನಾರ್ಧನ ಹಂದೆ ಮಂಗಳೂರು ಅವರ ಗೌರವ ಉಪಸ್ಥಿತಿಯಲ್ಲಿ ಉಜಿರೆ ಅಶೋಕ್ ಭಟ್ ಅವರ ಅಭಿನಂದನಾ ನುಡಿಯೊಂದಿಗೆ ‘ಪಾತಾಳ ಕಲಾ ಮಂಗಳ ಪ್ರಶಸ್ತಿ’ಯನ್ನು ಪ್ರಧಾನ ಮಾಡಲಾಗುವುದು. ಇದೇ ವೇಳೆ ಸ್ಥಳೀಯ ಸಮಾಜಸೇವಕರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಬೆತ್ತೋಡಿ ಲೋಕೇಶ್ ಪೂಜಾರಿ ಮತ್ತು ನೂಜಿ ಪದ್ಮನಾಭ ಗೌಡರಿಗೂ ಗೌರವ ಸಮರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸುಂಕದಕಟ್ಟೆ ಬಜ್ಪೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.