ಅಂಕೋಲಾ : ಭಾರತದ 78 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕ ಹಾಗೂ ಸಾಹಿತಿಗಳ ಒಕ್ಕೂಟವಾದ ಮಿತ್ರ ಸಂಗಮ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಹಾಗೂ ಅಂಕೋಲದ ಹಿರಿಯ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ 23 ಆಗಸ್ಟ್ 2024ರಂದು ನಡೆಯಿತು.
ಅಂಕೋಲ ಇಲ್ಲಿನ ಗ್ರಾಮೀಣ ಭಾಗದ ಬೇಳಾಬಂದರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಉಪಯುಕ್ತ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಮೋಹನ ಹಬ್ಬು, ರಾಮಕೃಷ್ಣ ಗುಂದಿ, ನಾಗೇಂದ್ರ ತೊರ್ಕೆ, ಗೋಪಾಲಕೃಷ್ಣ ನಾಯಕ ಹಾಗೂ ಮಹಾಂತೇಶ ರೇವಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ಕ. ಸಾ. ಪ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಮಾತನಾಡಿ “ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಗೌರವ ಹೊಂದಿರಬೇಕು. ವ್ಯಕ್ತಿತ್ವ ವೃದ್ಧಿಸಿಕೊಳ್ಳಲು ಉತ್ತಮ ಪುಸ್ತಕಗಳ ಓದು ಸಹಕಾರಿಯಾಗುವುದು.” ಎಂದರು. ಹಿರಿಯ ಸಾಹಿತಿ ಹಬ್ಬು ಇವರು ಕಾರ್ಯಕ್ರಮದಲ್ಲಿ ಭಾವಗೀತೆ ಹಾಡಿದರು. ರಾಮಕೃಷ್ಣ ಗುಂದಿ ಇವರು ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಾಹಿತಿಗಳಾದ ನಾಗೇಂದ್ರ ತೊರ್ಕೆ, ಮಹಾಂತೇಶ ರೇವಡಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಮಾದೇವ ಆಗೇರ ಸಾಂದರ್ಭಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ವಾಮನ ಆಗೇರ ಸ್ವಾಗತಿಸಿ, ಶಿಕ್ಷಕಿ ಸುಮನಾ ನಾಯಕ ನಿರೂಪಿಸಿ, ಸುವರ್ಣ ನಾಯಕ ಸಹಕರಿಸಿ, ಶಿಕ್ಷಕಿ ವಿನುತಾ ನಾಯಕ ವಂದಿಸಿದರು. ಎಸ್. ಡಿ. ಎಂ. ಸಿ. ಅಧ್ಯಕ್ಷ ರತ್ನಾಕರ ನಾಯ್ಕ ಉಪಸ್ಥಿತರಿದ್ದರು.