ಉಡುಪಿ : 2024ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ನೀಡಿದ ‘ಸುವರ್ಣ ಸಂಭ್ರಮ ಪ್ರಶಸ್ತಿ’ಯನ್ನು ಪಡೆದ ಪೇತ್ರಿ ಮಂಜುನಾಥ ಪ್ರಭುಗಳನ್ನು ಅವರು ಹಿಂದೆ ಗುರುವಾಗಿ ಸೇವೆ ಸಲ್ಲಿಸಿದ್ದ ಯಕ್ಷಗಾನ ಕೇಂದ್ರ, ಇಂದ್ರಾಳಿಯಲ್ಲಿ ಯಕ್ಷರಂಗದ ಸದಸ್ಯರು ಹಾಗೂ ಗುರುಗಳ ಸಮ್ಮುಖದಲ್ಲಿ ದಿನಾಂಕ 05 ನವಂಬರ್ 2024 ರಂದು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಯಿಸಿ ಮಾತನಾಡಿದ ಪೇತ್ರಿ ಮಂಜುನಾಥ ಪ್ರಭು “ಶಿವರಾಮ ಕಾರಂತರ ಆದೇಶದಂತೆ ತಾನು ಯಕ್ಷಗಾನ ಮೇಳವನ್ನು ಬಿಟ್ಟು ಕೇಂದ್ರದ ಗುರುವಾಗಿ ಬಂದೆ. ಪರಂಪರೆಯ ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದ ಅಗತ್ಯತೆಯಿದೆ.” ಎಂದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ “ಮಂಜುನಾಥ ಪ್ರಭುಗಳಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇರುವ ಜ್ಞಾನ ಹಾಗೂ ಅವರು ನೀಡಿರುವ ಕೊಡುಗೆಗಳು ಆವಿಸ್ಮರಣೀಯ. ಅವರ ಜ್ಞಾನವನ್ನು ಮುಂದಿನ ದಿನಗಳಲ್ಲಿ ಯಕ್ಷಗಾನ ಕೇಂದ್ರದ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲಾಗುವುದು.” ಎಂದರು.
ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ವಿಶ್ವನಾಥ ಶೆಣೈ, ಕೇಂದ್ರದ ಗುರುಗಳು ಹಾಗೂ ಯಕ್ಷರಂಗದ ಸದಸ್ಯರು ಹಾಜರಿದ್ದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶ್ರೀ ಭುವನ ಪ್ರಸಾದ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು.