ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ. ಪನ್ನಗಾ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಪಿ.ಜಿ. ಪನ್ನಗಾ ರಾವ್ ಇವರು ಉಡುಪಿಯ ಶ್ರೀ ಗಣೇಶ್ ರಾವ್ ಹಾಗೂ ಶ್ರೀಮತಿ ಸುಮನಾ ಜಿ. ರಾವ್ ದಂಪತಿಗಳ ಸುಪುತ್ರಿ. ಉಡುಪಿಯ ಸೃಷ್ಟಿ ನೃತ್ಯಕಲಾ ಕುಟೀರ ಸಂಸ್ಥೆಯ ನಿರ್ದೇಶಕಿಯಾಗಿರುವ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿರುತ್ತಾರೆ. ಈವರೆಗೆ 600ಕ್ಕೂ ಮಿಕ್ಕಿ ಭರತನಾಟ್ಯ ಪ್ರದರ್ಶನವನ್ನು ನೀಡಿರುವ ಈಕೆ ವಿದ್ಯಾರ್ಜನೆಯಲ್ಲಿಯೂ ಉನ್ನತ ಸಾಧನೆಯನ್ನು ಮಾಡಿರುತ್ತಾರೆ. ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ ನಡೆಸುವ ಭರತನಾಟ್ಯ ಜ್ಯೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ದೇಶದಾದ್ಯಂತ ನಡೆಯುವ ಪ್ರತಿಷ್ಠಿತ ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ‘ಶ್ರೇಷ್ಠಕಲಾಯಶಸ್ವಿ’, ‘ನಾಟ್ಯ ಪ್ರವೀಣೆ, ‘ನಟವಾರ್ ಗೋಪಾಲಕೃಷ್ಣ ನ್ಯಾಷನಲ್ ಅವಾರ್ಡ್’, ‘ಕಲಾ ಸೌರಭ’, ‘ನೃತ್ಯ ವೃಂದ 2020’, ‘ನಾಟ್ಯ ಪ್ರಿಯ’, ‘ನಾದನಂ ಶೋಭನಮ್ 2020’, ‘ನಾಟ್ಯ ಮಯೂರಿ’ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿರುತ್ತಾರೆ.