ಉಡುಪಿ : ತುಳು ಕೂಟ ಉಡುಪಿ ಮತ್ತು ಕ್ಷಿಪ್ರ ಪದ್ಮ ಪ್ರಕಾಶನ ದೊಡ್ಡಣಗುಡ್ಡೆ ಆಶ್ರಯದಲ್ಲಿ ದಿನಾಂಕ 03-06-2023ರಂದು ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ‘ಕವಿಗೋಷ್ಟಿ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಪ್ಪುಂದ ಸ.ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಯಾದವ ಕರ್ಕೇರಾ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ. ಪಿ. ಕೃಷ್ಣ ಪ್ರಸಾದ್, ಯಶೋದಾ ಕೇಶವ್, ದಯಾನಂದ ಶೆಟ್ಟಿ ದೆಂದೂರ್ ಕಟ್ಟೆ, ಪ್ರಕಾಶ್ ಸುವರ್ಣ ಕಟಪಾಡಿ, ಅಮಿತಾಂಜಲಿ ಕಿರಣ್, ಉಮೇಶ್ ಆಚಾರ್ಯ, ಅಮೃತಾ ಸಂದೀಪ್, ಮಲ್ಲಿಕಾ ಎಚ್. ಶೆಟ್ಟಿ, ಜ್ಯೋತಿ ಎಸ್. ದೇವಾಡಿಗ, ಪೂರ್ಣಿಮಾ ಶೆಟ್ಟಿ ಮತ್ತು ಸುಷ್ಮಾ ಎ. ಎಸ್. ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ವಿದ್ಯಾ ಸರಸ್ವತಿ ನಿರೂಪಿಸಿದರು.
ವಾಸಂತಿ ಅಂಬಲಪಾಡಿ ಬರೆದ ‘ಪಿಜಿನ್‌ದ ಬಾಸೆ ನಿಗಲೆಗ್ ತೆರಿಯುಂಡಾ’ ತುಳು ಕವನ ಸಂಕಲನ ಬಿಡುಗಡೆಗೊಳಿಸಿದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ.ನಿ.ಬೀ.ವಿಜಯ ಬಲ್ಲಾಳ್ “ತುಳು ಭಾಷೆಗೆ ಮಹತ್ವರವಾದ ಸ್ಥಾನವಿದೆ. ಮುಂದಿನ ಪೀಳಿಗೆಗೆ ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ತುಳುನಾಡಿನಲ್ಲಿ ಮಾತ್ರವಲ್ಲದೆ ಈ ಭಾಷೆ ದೇಶ ವಿದೇಶದಲ್ಲಿಯೂ ಬಹಳಷ್ಟು ಬೆಳೆದಿದೆ. ತುಳು ಭಾಷೆ ಮಾತನಾಡುವ ಜನರೊಂದಿಗೆ ಆತ್ಮೀಯ ಭಾವ ಮೂಡುತ್ತದೆ. ತುಳು ಕವಿಗೋಷ್ಟಿ, ತುಳು ಪುಸ್ತಕ ಬರೆಯುವ ಮೂಲಕ ಜನರಿಗೆ ತಲುಪುವ ಕೆಲಸ ಆಗಬೇಕು” ಎಂದು ಹೇಳಿದರು.
ಉಡುಪಿಯ ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ “ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಕವಿಗೋಷ್ಠಿ, ತುಳು ಕಥಾ ಕಮ್ಮಟ ನಡೆಸಬೇಕು. ಅಂತಾರಾಷ್ಟ್ರೀಯ ತುಳು ಒಕ್ಕೂಟ ಅದಕ್ಕೆ ಸಹಕಾರ ನೀಡಲಿದೆ” ಎಂದರು. ಹಿರಿಯಡ್ಕದ ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯರು ಪುಸ್ತಕವನ್ನು ಪರಿಚಯ ಮಾಡಿದರು.
ಸಂತ ಸಿಸಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಗಿನಿ ರಚನಾ ಎ.ಸಿ., ಮುಂಬಯಿ ಉಪನ್ಯಾಸಕಿ ಶ್ರೀಮತಿ ಹರಿಣಾಕ್ಷಿ ಲಲಿತ್ ರಾಜ್ ಸುವರ್ಣ, ಕ್ಷಿಪ್ರ ಪ್ರಸಾದ ಹಾಗೂ ಪದ್ಮ ಪ್ರಸಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲೇಖಕಿ, ಸಾಹಿತಿ ವಾಸಂತಿ ಅಂಬಲಪಾಡಿ ಸ್ವಾಗತಿಸಿ, ಶಿಕ್ಷಕಿ, ಸಾಹಿತಿ ಅಮೃತಾ ಸಂದೀಪ್ ನಿರೂಪಿಸಿ, ಪೂರ್ಣಿಮ ಶೆಟ್ಟಿ ವಂದಿಸಿದರು.