ಪಡುಬಿದ್ರೆ : ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಹಾಗೂ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇದರ ಸಹಯೋಗದಲ್ಲಿ ಸುರ್ ಮಣಿ ಪಂ. ಕಿರಣ್ ಹೆಗ್ಡೆ ಇವರ ಹಿಂದೂಸ್ಥಾನಿ ಶಾಸ್ತ್ರೀಯ ಕೊಳಲು ವಾದನ ಕಛೇರಿಯು ದಿನಾಂಕ 15-03-2024ರಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ನಡೆಯಿತು.
ಪಂ. ಕಿರಣ್ ಹೆಗ್ಡೆ ಇವರು ಸಂಜೆಯ ಪೂರಿಯಾ ಕಲ್ಯಾಣ್ ರಾಗವನ್ನು ಪ್ರಸ್ತುತಪಡಿಸಿದರು. ಅವರ ಕೊಳಲ ನಾದವು ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ಆರಂಭದ ಆಲಾಪ್, ಜೋಡ್ ಹಾಗೂ ಝಾಲಾ ಇದರ ವಿಶಿಷ್ಟವಾದ ನುಡಿಸಾಣಿಕೆ ಕಾರ‍್ಯಕ್ರಮಕ್ಕೆ ಮೆರುಗನ್ನು ನೀಡಿತು. ಕಲಾಕಾರನ ಕಲಾ ನೈಪುಣ್ಯ ಕೇಳುಗರ ಹೃದಯ ಮುಟ್ಟುವಂತೆ ಅರಳಿಕೊಳ್ಳುತ್ತಾ ಮುನ್ನಡೆಯಿತು. ವಿಲಂಬಿತ ರೂಪಕ ತಾಳದಲ್ಲಿ ಲಯಬದ್ಧವಾಗಿ ರಾಗ-ರಸ ಕಾಲೇಜಿನ ಸಭಾಭವನದಲ್ಲಿ ತುಳುಕಾಡುತ್ತಿದ್ದಂತೆ ಕೇಳುಗರು ಮಂತ್ರಮುಗ್ಧವಾಗದೇ ಇರಲು ಸಾಧ್ಯವಾಗಲಿಲ್ಲ. ಉನ್ನತ ಸಂಗೀತದ ಉಯ್ಯಾಲೆಯಲ್ಲಿ ತೇಲಾಡಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಲಾ ರಸಿಕರಾದರು ಮಾತ್ರವಲ್ಲ, ಕಾಲೇಜಿನಲ್ಲಿ ನಡೆದ ಈ ವಿಶಿಷ್ಟ ಸಂಗೀತ ರಸದೌತಣದಲ್ಲಿ ಮಿಂದೆದ್ದರು. ತುಳಸೀದಾಸರು ಭಕ್ತಪರವಶರಾಗಿ ತಮ್ಮ ʼರಾಮಚರಿತಮಾನಸʼದಲ್ಲಿ ಕಟ್ಟಿಕೊಟ್ಟ, ಮಹಾತ್ಮಾ ಗಾಂಧೀಜಿಯವರು ಭಕ್ತಿಯಿಂದ ಭಜಿಸಿದ, ಪಂ. ವಿಷ್ಣು ದಿಗಂಬರ್ ಪಲುಸ್ಕರ್ ಇವರು ಮಿಶ್ರ ಗಾರಾ ರಾಗದಲ್ಲಿ ಸಂಗೀತ ಸಂಯೋಜಿಸಿದ ʼರಘುಪತಿ ರಾಘವʼ ರಾಮ ಧುನ್ ಇದನ್ನು ಕಿರಣ್ ಹೆಗ್ಡೆಯವರು ಸೃಶ್ಯಾವ್ಯವಾಗಿ ಸಾದರ ಪಡಿಸಿದರು. ಈ ಧುನ್ ನೇರವಾಗಿ ಕೇಳುಗರ ಮನಸ್ಸನ್ನು ಪ್ರವೇಶಿಸಿ ಬಹಳ ಕಾಲ ನೆನಪಿನಲ್ಲಿರುವಂತೆ ಮೂಡಿಬಂತು.
ಕಾರ್ಯಕ್ರಮದ ಕೊನೆಯ ಪ್ರಸ್ತುತಿಯಾಗಿ ಜಾನಪದ ಮಟ್ಟುಗಳನ್ನು, ಹಕ್ಕಿಗಳ ಸಂತೃಪ್ತ ಭಾವವನ್ನು ನೆನಪಿಸುವಂತಹ ಲಘು ಶಾಸ್ರ‍್ತೀಯ ಧುನ್ ಸಣ್ಣ ಕೊಳಲಿನ ಮಾಂತ್ರಿಕತೆಯನ್ನು ಪ್ರಮಾಣೀಕರಿಸಿತು. ಕಲಾವಿದನ ಗುರು ಪರಂಪರೆಯ ಅದ್ವಿತೀಯ ಕೊಡುಗೆಯೋ ಎಂಬಂತೆ ಪಂ. ಕಿರಣ್ ಹೆಗ್ಡೆ ತುಂಬಾ ಎತ್ತರದ ಸಂಗೀತಾನುಭವವನ್ನು ಕೇಳುಗರಿಗೆ ಉಣಬಡಿಸಿದರು. ಸುರತ್ಕಲ್ಲಿನ ಶ್ರೀ ಭಾರವಿ ದೇರಾಜೆ ತಬಲಾದಲ್ಲಿ ತಮ್ಮ ವಿಶಿಷ್ಟವಾದ ಕಲಾ ನೈಪುಣ್ಯತೆಯನ್ನು ಮೆರೆದರು. ಪಕ್ಕವಾದ್ಯದ ಬಹು ಸಾಧ್ಯತೆಗಳನ್ನು ತೆರೆದಿಡುತ್ತಾ, ಸವಾಲ್-ಜವಾಬ್ ಹಂತದಲ್ಲಿ ಕೇಳುಗರ ಕುತೂಹಲವನ್ನು ಇಮ್ಮಡಿಗೊಳಿಸಿದರು.