ಅಮ್ಮ ನಿನ್ನ ನೆನಪೆ ನನ್ನ ಬಾಳಿಗೊಂದು ಶಕ್ತಿ
ಮರೆಯಲೆಂತು ಉಣಿಸಿ ಉಳಿಸಿ ಕೊಟ್ಟು ಹೋದ ಪ್ರೀತಿ ||ಪ.||
ಅಂಕೆಯಿರದೆ ಕಟ್ಟಿಕೊಂಡೆ ಕಣ್ಣತುಂಬ ಕನಸು
ಶಂಕೆಯಿರದೆ ನೋಡಿಕೊಂಡೆ ಆಗಲೆಂದು ನನಸು|
ಮೌನದಲ್ಲೆ ಪುಳಕಗೊಂಡೆ ಕಂಡು ಮಡಿಲ ಸೊಗಸು
ಬಿಂಕದಿಂದ ಹೇಳಿಕೊಂಡೆ ಅದುವೆ ನನ್ನ ಕೂಸು ||೧||
ಕಲಿಸಿ ರೀತಿ-ನೀತಿ, ಮಿತಿಯು ಮೀರದಂತೆ ದಾಟಿ
ತಿಳಿಸಿ, ಬೆಳೆಸಿ, ಒಲವ ಆಳ ರಾಗ-ಭಾವ ಮೀಟಿ |
ಮಾತಿಗಿಂತ ದುಡಿದೆ ಹೆಚ್ಚು ದಣಿವರಿಯದ ಮೇಟಿ
ತ್ಯಾಗ, ಸಹನೆ, ಕರುಣೆಯೊಡಲು ನಿನಗೆ ನೀನೆ ಸಾಟಿ ||೨||
ಅಪ್ಪಿ ನಾನು ಮುದದಿ ನೀನು ಹಾಕಿ ಕೊಟ್ಟ ದಾರಿ
ಭಯದ ಮನದಿ ಎಲ್ಲಿ ಗುರಿಯು ತಪ್ಪಬಹುದೊ ಜಾರಿ |
ಗುಡುಗೊ, ಮಳೆಯೊ ಬಿಡದೆ ನಡೆದೆ, ತಿರುಗಲಿಲ್ಲ ಹೆದರಿ
ಜತನದಿಂದ ಕಾಯ್ದೆ ಬದುಕು ಹೋಗದಂತೆ ಸೋರಿ ||೩||
– ರೂಪಕಲಾ ಆಳ್ವ

