ಸುಟ್ಟ ಚಿಗುರೆಲೆ ರಾಶಿಯಲಿ
ಬೃಹತ್ಕಾಂಡಗಳ ಕಾಲಡಿ
ಕ್ಷೀಣ ಚೀತ್ಕಾರಗಳು
ಹದ್ದು-ಗದ್ದಲದಲಿ ಮರೆ ;
ನೆತ್ತರಂಟಿದ ಹೆಜ್ಜೆ ಗುರುತುಗಳ
ಹಾದಿಯಲಿ ಕುಸಿದ ಆಲದ
ಬೇರುಗಳು ಕಣ್ಮರೆ !
ಹೆಣಗಳು ಮಾತನಾಡುತ್ತವೆ
ಜೀವದ ಸದ್ದಡಗಿದೆ
ಚಿಗುರೊಡೆದ ಕವಲುಗಳಲಿ
ಆರ್ದ್ರತೆಯ ಕಂಪನ ;
ಹೂ ಪಕಳೆಗಳ ಚಿತ್ತಾರದಲಿ
ಬೆಂದ ಕುಸುಮಗಳು
ನಿಸ್ತೇಜ ,,,,ಗಗನ ಮುಖಿ !
ಆರ್ತನಾದ ಒಳಗಿನದೇ
ಛಿದ್ರ ದೇಹಗಳು ಮಡಿಲಿನದೇ
ಅವರಾರೂ ಆಗಂತುಕರಲ್ಲ
ಶುದ್ಧ ಸ್ವದೇಶಿ ಸುತರೇ
ಬಲಿಪೀಠದ ನೆತ್ತರ ಹೊಂಡದಲಿ
ತಾಯ್ಮಮತೆಯ ಕಂಬನಿ !
ಧರ್ಮದ ಓಂಕಾರ ನಾದ
ಅಧ್ಯಾತ್ಮದ ಝೇಂಕಾರ ನಿನಾದ
ನಿತ್ಯ ಸರಿಗಮ ಸ್ವರದ
ಏರಿಳಿತಗಳ ನಡುವೆ
ಹೂತುಹೋದ ಧ್ವನಿಗಳು
ಬಯಲ ಆಲಯಗಳಲಿ
ಮಾತು ಮೌನ ಮೌನ ಮೃತ
ಯಾತನೆಗಳ ಮರ್ತ್ಯೋತ್ಸವ !
ಮನುಜರಿಲ್ಲದ ಸಾಮ್ರಾಜ್ಯದಲಿ
ಹುಡುಕಾಟ
ಅಡಗಿಸಿದ ಮೂಕ ಧ್ವನಿಗಳಿಗಾಗಿ ;
ಕಳೆದುಹೋಗಿರುವುದೇನು ?
ಮನುಜ ಪ್ರಜ್ಞಾಭರಣಗಳು
ಧರ್ಮ ನೀತಿ ಸಭ್ಯತೆ ನಿಷ್ಠೆ
ಶ್ರದ್ಧೆ ಭಕ್ತಿ ಸತ್ಯ ಹೃದಯ ಸದ್ಭಾವ
ಮತ್ತು ,,,,,,,ಸೌಜನ್ಯ !!!!!
ನಾ ದಿವಾಕರ