ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿ
ಸಂಭ್ರಮಿಸುತ್ತೀರಿ
ನಮ್ಮತ್ತ ನೋಡುವುದೂ ಇಲ್ಲ
ಏಕೆಂದು ಹೇಳುವಿರಾ ?
ನಮಗೆ ಹಣತೆ ಹಚ್ಚುವುದು
ಮುಸ್ಸಂಜೆ ಮೋಂಬತ್ತಿ ಹಿಡಿಯುವುದು
ನಿತ್ಯ ಕಾಯಕವಾಗಿದೆ
ಏಕೆಂದು ಅರ್ಥವಾಗಿದೆಯೇ ?
ನಮ್ಮ ಪ್ರಣತಿಯ ಬೆಳಕಿನಲಿ
ಮಡುಗಟ್ಟಿದ ವೇದನೆಗಳಡಗಿವೆ
ಬಲಿಪೀಠಗಳ ಛಾಯೆಯಿದೆ
ಏಕಿರಬಹುದು ತಿಳಿಸುವಿರಾ ?
ನಮ್ಮ ಹಣತೆಗಳು ಸಾಲುಗಟ್ಟುವುದಿಲ್ಲ
ನೊಂದ ಹೃದಯಗಳು
ಮೌನ ಸರಪಳಿಗಳಾಗುತ್ತವೆ
ಏಕೆಂದು ಊಹಿಸಬಲ್ಲಿರಾ ?
ದಮನಿತರ ಯಾತನೆಗಳ ಕೊಳ
ನಮ್ಮ ಹಣತೆಗಳ ತೈಲ
ಮನುಜ ಸೂಕ್ಷ್ಮತೆಯೇ ಬತ್ತಿಗಳು
ಏಕಿರಬಹುದು ಯೋಚಿಸಬಲ್ಲಿರಾ ?
ನಿಮ್ಮ ಹಣತೆಗಳಿಗೆ ಕಥನಗಳಿವೆ
ನಮ್ಮ ದೀಪಗಳ ಅವಳಿಗೆ
ವರ್ತಮಾನದ ದುರಂತಗಳಿವೆ
ಕಾರಣ ಹೇಳಬಲ್ಲಿರಾ ?
ಉರಿದ ಜೀವಗಳೇ ನಮ್ಮ ಹಣತೆ
ಹರಿದ ನೆತ್ತರೇ ತೈಲ
ನಿಮ್ಮ ಅಂಧಕಾರವ ನೀಗಿಸಲು
ನಮ್ಮ ಬತ್ತಿಯ ಬೆಳಕು
ಬೆಂದ ಹೆಣ್ಕುಲದ ಭಾವನೆಗಳು
ಸರಪಳಿಯ ಕೊಂಡಿಗಳು
ಸಂಕೋಲೆಗಳ ಕಿತ್ತೊಗೆಯಲು
ಸಂವೇದನೆಯ ಹೆಗಲುಗಳು
ಈಗಲಾದರೂ ಅರ್ಥವಾಯಿತೇ ?
ಆಗದು ಬಿಡಿ,,, ನೀವು,,,
ಅಂಧ ಯುಗದ ಸರದಾರರು
ದೌರ್ಜನ್ಯಗಳ ಸೂತ್ರಧಾರರು
ಸುಡುವ ಸಂಸ್ಕೃತಿಯ
ವಾರಸುದಾರರು
ಅಂಧಕಾರದ ಪಾಪಕೂಪಗಳ
ಸಾಮ್ರಾಟರು
ಹೇಗೆ ಅರ್ಥವಾದೀತು
ನಮ್ಮ ನಾಡಿಮಿಡಿತ ಜೀವತುಡಿತ
ಅರ್ಥವಾಗದು ಬಿಡಿ !

ನಾ ದಿವಾಕರ
