ಮಡಿಲಲ್ಲಿ ಮುಖ ಹುದುಗಿಸಿ
ಕಂಬನಿಯಲಿ ಒಡಲ ತೋಯಿಸುವ
ಅಂತರಾಳದ ಹಂಬಲಕೆ
ಓಗೊಡಲು ಯಾರಿಹರಿಲ್ಲಿ ?
ತಾಯ್ಮಮತೆಯ ನೆನಪಾದಾಗಲೆಲ್ಲಾ
ಮೂಡುವುದೊಂದೇ ಜಿಜ್ಞಾಸೆ
ಅಮ್ಮಾ ನೀನೇಕೆ ದೂರಾದೆ ?
ಸಂಬಂಧ ಎಂದರೇನಮ್ಮಾ
ಲೌಕಿಕ ಸುಖದ ಹಾದಿ ಪಯಣವೇ ?
ಭೌತಿಕ ಸ್ಪರ್ಶದಲಿ ಹಿತಕಾಣುವ
ತನುಮನ ಭಾವನೆಗಳ ಮಿಳಿತವೇ ?
ಅಥವಾ ಮಿಲನ ಸುಖದಲಿ ಮಿಂದು
ಸಾಂಗತ್ಯದಲ್ಲೇ ಸಾರ್ಥಕ್ಯ ಕಾಣುವುದೇ ?
ನೋವಿಗೆ ಸ್ಪಂದಿಸದ ಭಾವ
ಮರಳುಗಾಡಿನ ಹಸಿರು ದಿಬ್ಬದಂತಲ್ಲವೇ ?
ಮಾಸದ ಗಾಯಗಳು
ಮಾಗಿದ ಅಂತರಂಗದ ಯಾತನೆಗಳು
ಮತ್ತೆಮತ್ತೆ ಇರಿದು ಚಿಮ್ಮುತ್ತಿರುವಾಗ
ಎದೆಯಾಗ್ನಿಯ ಕುಲುಮೆಗೆ
ತಂಪೆರೆಯುವ ಒಂದೆರಡು ಸವಿಮಾತು
ಬೇಕಲ್ಲವೇನಮ್ಮಾ ,,,,,?
ಬಂಧನದ ಸಂಕೋಲೆಗಳಲಿ
ಎದೆಯ ಸದ್ದಿಗೆ ನಾಡಿ ಕಿವುಡಾದರೆ
ಬೆಸುಗೆಯ ಸಾರ್ಥಕ್ಯವ ಕಾಣುವುದೆಲ್ಲಿ ?
ಈ ಆಂತರ್ಯದ ಕೂಗು ನಿನಗೆ ಕೇಳಿಸದು
ಮರ್ತ್ಯ ಲೋಕದ ಹೊಸ್ತಿಲಿಗೆ
ಕಟ್ಟಿರುವ ತೋರಣವ ಛೇದಿಸಿ ನೋಡು
ನಿನ್ನ ಕಂದನ ನೋವಾದರೂ ಕಂಡೀತು !
– ನಾ ದಿವಾಕರ