ಸುರಿಯೋ ಸುರಿಯೋ ಜೋರಾಗಿ ಮಳೆರಾಯ
ತೊಳೆಯೋ ತೊಳೆಯೋ ಜಗದ ಸಕಲ ಕೊಳೆಯ
ಬೆಳೆಯೋ ಬೆಳೆಯೋ ಹೊಲಗದ್ದೆಯಲಿ ಬೆಳೆಯ
ಕಳೆಯೋ ಕಳೆಯೋ ಜೀವರಾಶಿಯ ಹಸಿವೆಯ
ಮುಂಗಾರು ಮಳೆ ಬಂದಿದೆ ಇಳಿಯು ತಂಪಾಗಿದೆ
ಚಿಗುರಿ ನಲಿದಾಡುತಾ ಗಿಡಮರಗಳು ಓಲಾಡಿದೆ
ಹಸಿರಿನ ಅಲಂಕಾರದಿ ಬುವಿಯು ಕಂಗೊಳಿಸಿದೆ
ತರು ಲತೆಗಳಲ್ಲಿ ಹೂವರಳಿ ಶೃಂಗಾರಗೊಂಡಿದೆ
ವರುಣನ ಆರ್ಭಟವು ನೀರಿನ ತೊರೆಯ ಹರಿಸಿದೆ
ನೀಲಿ ಸಾಗರವು ಮೈತುಂಬಿ ಭೋರ್ಗೆರೆಯುತಿದೆ
ಗಿಡಮರಗಳು ಚಿಗುರಿ ನಿಂತು ಅವನಿ ಹಸಿರಾಗಿದೆ
ಕೃಷಿಕನ ಜೀವನದಿ ಹೊಸ ಪುಟವೊಂದು ತೆರೆದಿದೆ
ಮಳೆ ಚಳಿ ಬೇಸಿಗೆ ಮೂರು ಕಾಲಗಳ ಸೂತ್ರವು
ಜಗದ ಋತುಚಕ್ರ ನಿಯಮಗಳ ಮುಖ್ಯ ಪಾತ್ರವು
ಕಾಲ ಕಾಲಕ್ಕೂ ಅದರದ್ದೇ ಆದ ಪ್ರತ್ಯೇಕತೆ ಇಹುದು
ಸಮಾನಾಗಿ ಹೊಂದಿಕೊಂಡು ಜಗವ ನಡೆಸುವುದು
ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ