ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಸಹಯೋಗದೊಂದಿಗೆ ಕವಿ ಕುರಾಡಿ ಸೀತಾರಾಮ ಅಡಿಗ ‘ಕಾವ್ಯ ಪ್ರಶಸ್ತಿ -2025’ ಪ್ರದಾನ ಸಮಾರಂಭವನ್ನು ದಿನಾಂಕ 23 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಅಂಬಲಪಾಡಿ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪುಸ್ತಕ ಲೋಕಾರ್ಪಣೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ.
ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಇವರು ದೀಪ ಪ್ರಜ್ವಲನೆ ಮಾಡಿ ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ವಿಶ್ರಾಂತ ಉಪಸಂಪಾದಕರಾದ ಎಸ್. ನಿತ್ಯಾನಂದ ಪಡ್ರೆ ಇವರು ಕವಿ ಕುರಾಡಿ ಸೀತಾರಾಮ ಅಡಿಗ ‘ಕಾವ್ಯ ಪ್ರಶಸ್ತಿ’ಯನ್ನು ಶಶಿ ತರೀಕೆರೆ ಇವರಿಗೆ ಪ್ರದಾನ ಮಾಡಲಿದ್ದಾರೆ. ಮಂಜುಶ್ರೀ ಕೃಷ್ಣ ಭಟ್ ಇವರ ‘ಜೀವನ ಧರ್ಮ’ ಕೃತಿಯನ್ನು ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಲೋಕಾರ್ಪಣೆಗೊಳಿಸಲಿದ್ದು, ಶಿಕ್ಷಣ ತಜ್ಞರಾದ ರಂಗಪ್ಪಯ್ಯ ಹೊಳ್ಳ ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಡಾ. ಶಿವರಾಮ ಕಾರಂತ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರ್ ಇವರು ಉರಗತಜ್ಞ ಗುರುರಾಜ್ ಸನಿಲ್ ಇವರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದಾರೆ.

