ಬಡಿಯಡ್ಕ : ‘ಸವಿ ಹೃದಯದ ಕವಿ ಮಿತ್ರರು’ ಎಂಬ ಕವಿ ಕೂಟದ ಪರವಾಗಿ ಸುಭಾಷ್ ಪೆರ್ಲ ಅವರ ಪ್ರೀತಿಯ ಆಮಂತ್ರಣ ಸಿಕ್ಕಿತ್ತು . ಹಾಗೆ ದಿನಾಂಕ 04-02-2024ರಂದು ಪೆರ್ಲಕ್ಕೆ ಹೋದೆ. ಕೂಟ ಕೂಡಿದ ಸ್ಥಳ ಒಂದು ಕಾಡು ಮರಗಳ ಹಿತ್ತಿಲು ಹರೀಶ ಶೆಣೈ ಅವರ ಕುಟುಂಬಕ್ಕೆ ಸೇರಿದ್ದು. ಅವರದೇ ಅಚ್ಚುಕಟ್ಟಾದ ಮನೆ. ಹಳೆತಾದರೂ ತಂಪಿನ, ಸಾಕಷ್ಟು ವಿಶಾಲ ವರಾಂಡದ, ಅದನ್ನೂ ಮಿಕ್ಕ ಸಜ್ಜನಿಕೆಯ ಮನೆಮಂದಿ ಇರುವ ತಾಣ.
ಇಲ್ಲಿ ಕವಿ ಮತ್ತು ಕವಿತೆಗಳ ಕುರಿತ ನನ್ನ ಎರಡು ಅನಿಸಿಕೆ ಹೇಳಲೇ ಬೇಕು. ನನಗೆ ಎಂದೂ ಇತರರ ಕವಿತೆಗಳ ಶೈಲಿ, ಮುಗ್ಧ ಭಾವ, ಆರಿಸಿಕೊಂಡ ವಸ್ತುವಿಗೆ ಅವರು ಕೊಡುವ ನ್ಯಾಯ ಮುಂತಾದ್ದು ಇಷ್ಟ. ಕವಿಗೆ ಒಂದು ಬಗೆಯ ನಿಸ್ಪೃಹ ಭಾವ ಬೇಕು. ಯಾರನ್ನೊ ಮೆಚ್ಚಿಸುವುದಕ್ಕೆ ಬೇಕಾಗಿ ಬೌದ್ಧಿಕತೆ, ಪ್ರಾಸಕ್ಕಾಗಿ ಕಸರತ್ತುಗಳು ಇರಕೂಡದು. ಬಹುಶಃ ಇಂಥಾದ್ದನ್ನೆಲ್ಲ ಈ ಹಿಂದೆ ಮಾಡಿದ್ದರಿಂದ ಆದ ಪಶ್ಚಾತ್ತಾಪ ನನ್ನಿಂದ ಹೀಗೆ ಬರೆಸುತ್ತಿದೆಯೇನೊ.
ಒಂದು ಭಾವದ ಎಳೆ ಜಿನುಗಿ ಅದೇ ಕವಿತೆಯಾಗಿ ಸ್ಫುರಿಸುತ್ತ ಬರೆಯುವವನು ಮುಂದೆ ಒಂದೆಡೆ ನಿಲ್ಲಿಸಿ ಚಿಂತಿಸಬೇಕು. ಅಲ್ಲಿ ಸಮಕಾಲೀನ ಇರವು ಮತ್ತು ಅರಿವು ಜೋಡಿಬಂದರೆ ಒಳ್ಳೆಯ ಸಂದೇಶವೊಂದನ್ನು ಕೊಡಬಹುದು. ಇದರಿಂದ ಕವಿತೆಗೆ ಸಮಕಾಲಿಕ, ಸಾರ್ವಕಾಲಿಕ ಮೌಲ್ಯವೂ ಒದಗಿ ಬರುತ್ತದೆ .
ಸುಮಾರು ಇಪ್ಪತ್ತೈದು ಮಂದಿ ಕವಿತೆ ಓದಿದರು. ಶಾಲಾಮಕ್ಕಳು ದೀಕ್ಷ , ಗ್ರೀಷ್ಮರಿಂದ ತೊಡಗಿ ಹಿರಿಯ ಶಿವ ಪಡ್ರೆ (ವಾಸುದೇವ ಭಟ್) ತನಕ ವಿವಿಧ ವಯೋಮಾನದವರ ಸಭೆಯಲ್ಲಿ ಎಲ್ಲರ ವಯಸ್ಸು, ಅನುಭವಗಳು ಗಮನ ಸೆಳೆದದ್ದು ನಿಜವಾಗಿದ್ದರೂ ಅವೆಲ್ಲ ಬೇರೆಬೇರಾಗಿ ಆಕರ್ಷಿಸಿದುವು . ಸಮಾಜದಲ್ಲಿ ನಡೆಯುವ ದೌರ್ಜನ್ಯವನ್ನು ಪ್ರತಿಪಾದಿಸಿದ ಸಾಮಾಜಿಕ ನೋಟ ವಸ್ತುವಾಗುಳ್ಳ ಗೋಷ್ಠಿಯ ಪರಿಪೂರ್ಣ ಕವಿತೆ ಎಸ್.ಎನ್. ಭಟ್. ಸೈಪಂಗಲ್ಲು ಅವರದ್ದು.
ವಸ್ತು ವೈವಿಧ್ಯ, ಅವುಗಳಲ್ಲೆ ನಿಕ್ಷಿಪ್ತವಾದ ಒಳನೋಟಗಳು ನಿನ್ನೆ ಪ್ರೇಕ್ಷಕರನ್ನು ಸೆಳೆದುವು. ಕವಿತೆಯ ಕುರಿತೇ ಇದ್ದ ಹರೀಶರ ಕವನ ಮೆಲ್ಲುಲಿ ಭಾವಸ್ಫುರಿತ ಉದಯೋನ್ಮುಖಿ ಕಾವ್ಯ ವ್ಯಾಪಾರವನ್ನು ಪರಿಚಯಿಸಿದರೆ, ಪ್ರಕೃತಿ ವಿಕೃತಿ ಆದಾಗ ಪ್ರೀತಿ ಮಾಯವಾಗಿ ಅರ್ಥವಾಗದ ಭಾವಗಳು ಹೊಕ್ಕು ಹಾಡುವ ಗಂಟಲೊಣಗಿ ಭ್ರಮೆ ವಾಸ್ತವದೊಳಗಿನ ಅಂತರ ಅನಪೇಕ್ಷಿತ ಸಂಕ್ರಮಣದ ಆಗಮನವನ್ನು ತೋರಿಸುತ್ತದೆಂಬ ಭಾವವನ್ನು ಉಳಿಯತ್ತಡ್ಕರ ಕವಿತೆ ಸೂಚಿಸಿದರೆ ಬಾಲ ಮಧುರಕಾನನ , ಕವಿ ಗೀಚಿದ್ದೆಲ್ಲ ಕೊನೆಗೆ ಗಿಡಕ್ಕೆ ಗೊಬ್ಬರವಾಗಿ ಅಲ್ಲಿಂದ ಸುಂದರ ಹೂ ಅರಳಿದ ಸಂಕೀರ್ಣ ದೃಶ್ಯವನ್ನು ಮುಂದಿಟ್ಟರು.
ದೀಕ್ಷ ಮತ್ತು ವಿಜಯಲಕ್ಷ್ಮಿ ಬರೆದ ಅಮ್ಮನ ಕುರಿತ ಕವಿತೆಗಳು, ವಿಶಾಲಾಕ್ಷಿ ಚಂಬ್ರಕಾನ ಅವರ ಸಮಕಾಲಿಕ ವಸ್ತುವುಳ್ಳ ಕವನ, ಬಲಿಪ ಭಾಗವತರ ಮೇಲೆ ಶಿವ ಪಡ್ರೆ ಅವರ ಸಾರ್ಥಕ ವ್ಯಕ್ತಿತ್ವ ಚಿತ್ರಣ, ಗಡಿನಾಡಿನಲ್ಲಿ ಮಲತಾಯಿಯ ಕಾಟಕ್ಕೊಳಗಾದ ಪರಾಧೀನತೆಯ ಬಗ್ಗೆ ನೋವು ತುಂಬಿದ ನವ್ಯಶ್ರೀ ಕವಿತೆ, ನಾರಾಯಣ ನಾಯ್ಕ ಅವರು ಪರಿಭಾವಿಸಿದ ಅಯೋಧ್ಯಾ ನೋಟ, ಜ್ಯೋತ್ನಾ ಎಂ. ಭಟ್ ಅವರ ತತ್ವನಿಷ್ಠ ಕವಿತೆ, ಕಾಯಕದ ಅಗತ್ಯವನ್ನು ಒತ್ತಿಹೇಳುವ ಸೌಪರ್ಣಿಕಾ ಬೆಟ್ಟಂಪಾಡಿ ಅವರ ರಚನೆ ಇವೆಲ್ಲ ಸಾರ್ಥಕವಾಗಿ ಸಂವಹನಗೊಂಡವು.
ವರ್ಡ್ಸ್ವರ್ತನ ಡೆಫೊಡಿಲ್ಸ್ ಕವಿತೆಯ ಅನುವಾದವನ್ನು ಪ್ರಸ್ತುತ ಪಡಿಸಿದವರು ವಿ.ಬಿ. ಕುಳಮರ್ವ . ಇದು ವರ್ಡ್ಸ್ವರ್ತನ ರಮ್ಯ ನೋಟಗಳ ಕುರಿತ ಚರ್ಚೆಗೆಡೆಯಾಯಿತು. ಮಕ್ಕಳಲ್ಲಿ ನೋವು , ಚಿಂತೆ , ಹತಾಶೆಗಳು ಸುಂದರ ರಚನೆಗೆ ವಸ್ತುವಾಗುವುದಕ್ಕೆ ಶಾಲಾ ಬಾಲಕಿ ಗ್ರೀಷ್ಮಳು ಉದಾಹರಣೆಯಾದರೆ, ಸುಭಾಷ್ ಪೆರ್ಲರ ಕವನ ತಂದೆ ತಾಯಿ ಹೇಗೆ ಮಕ್ಕಳ ಮೇಲೆ ವಿಭಿನ್ನ ಮತ್ತು ಪೂರಕ ಪ್ರಭಾವ ಬೀರುತ್ತಾರೆಂಬುದನ್ನು ಸುಂದರವಾಗಿ ನಿರೂಪಿಸಿತು. ನವುರಾದ ಒಲವು, ಪ್ರೇಮಗಳ ಮೇಲೆಯೂ ಇನ್ನೊಂದು ಕವಿತೆ ಇತ್ತು. ನರಸಿಂಹ ಭಟ್, ಬಾಲಕೃಷ್ಣ ಬೇರಿಕೆ ಅವರ ಪ್ರಬುದ್ಧವೂ ಲಲಿತವೂ ಆದ ಚುಟುಕು ಕವನಗಳು ಮಾದರಿ ರಚನೆಗಳಾಗಿ ಗಮನ ಸೆಳೆದುವು. ಸ್ನೇಹಲತಾ ದಿವಾಕರ್ ಒಂದು ಆಶು ಕವನವನ್ನು ಪ್ರಸ್ತುತಪಡಿಸಿದ್ದರು. ಅದು ರಾಗಬದ್ಧವಾಗಿ ಹಾಡುವುದಕ್ಕೆ ಅನುಕೂಲವಾಗಿರುವುದು ಗಮನ ಸೆಳೆದರೆ ಸಂದರ ಬಾರಡ್ಕ ಎಲ್ಲ ಕಡೆಯಿಂದಲೂ ಸ್ವೀಕರಿಸಬೇಕಾದ ಬೆಳಕಿನ ಬಗ್ಗೆ ವಿವರಿಸುತ್ತ, ಬೆಳಕನ್ನು ತಡೆಯುವುದು ಅಸಾಧ್ಯ ಎಂದು ಕೊನೆಗೊಳಿಸಿದ ರೀತಿ ಮಾರ್ಮಿಕವೆನಿಸಿತು. ಪ್ರಾಸದ ಮೂಲಕ ಹಾಸ್ಯ ಸೃಷ್ಟಿಸಿದ ಕವಿತೆಯೊಂದು ಹೊಸ ಕವಿ ಮುರಲಿ ಕೃಷ್ಣನ ಪ್ರವೇಶಕ್ಕೆ ಸಾಕ್ಷಿಯಾಗಿತ್ತು.
ಕೊಂಕಣಿಯಲ್ಲಿ ಒಂದು ಕವನ ಹಾಗೂ ತುಳುವಿನ ಒಂದೆರಡು ರಚನೆಗಳು ಅದರಲ್ಲೂ ಮುಖ್ಯವಾಗಿ ನಿರ್ಮಲಾ ಶೇಷಪ್ಪ ಅವರ ರಚನೆಯೊಂದು ಲಲಿತ ಸುಂದರ ತುಳು ಭಾಷೆಯ ಸೊಗಡನ್ನೂ ಗೌರವಿಸಿತು. ಇತ್ತೀಚೆಗೆ ತಾತ್ವಿಕತೆಯ ಆಳ ಅಗಲದ ಸ್ಪರ್ಶ ಕಡಿಮೆ ಆಗುತ್ತಿದೆ ಎನ್ನಲಾಗದಂತೆ ಜ್ಯೋತ್ಸ್ನಾ ಎಂ. ಭಟ್ ಅವರ ಕವಿತೆ ಪ್ರಸ್ತುತಗೊಂಡಿತು. ಪರಿಭ್ರಮಣ ಎಂಬ ಈ ಕವಿತೆಯಲ್ಲಿ ವಿಜ್ಞಾನವೂ ಅಲೌಕಿಕತೆಯ ಕಡೆಗೆ ಬೊಟ್ಟು ಮಾಡುವ ಸ್ವಾರಸ್ಯಕರ ನಿರೂಪಣೆ ಇತ್ತು. ವೀಣಾ ಬನ್ನಂಜೆ ಒಂದೆಡೆ ಹೇಳುತ್ತಾರೆ “ಒಳ್ಳೆಯ ಕೆಲಸ ಮಾಡಿದ್ದಕ್ಕೆ ಅವಮಾನಗೊಳ್ಳುವಂತಾದರೆ ಅದನ್ನೇ ಸನ್ಮಾನ ಎಂದು ಭಾವಿಸಬೇಕು” ಎಂತಹ ಮಾತಲ್ಲವೆ ?
ಕವಿಗೋಷ್ಠಿಗಳಲ್ಲಿ ಹೀಗೆ ನಡೆದರಾಗದೆ ?
ಆಮಂತ್ರಿತರಾಗುವ ಕವಿಗಳ ರಚನೆಗಳನ್ನು ಅವರದೇ ಗ್ರೂಪ್ ಮಾಡಿ ಪೂರ್ವಭಾವಿಯಾಗಿ ಕೊಟ್ಟರೆ ಎಲ್ಲರೂ ಇತರರ ಕವಿತೆಗಳನ್ನು ಓದಿ ಬರಬಹುದು. ಎಲ್ಲ ವೇಳೆಯನ್ನು ಸಂವಾದ, ಕುಶಲೋಪರಿಗೆ ಬಳಸಬಹುದು. ಅದೇ ವೇಳೆ ಕೆಲವರು ತಮಗೆ ಇಷ್ಟವಾದ ಹೊರಗಿನ ಹಿರಿಯ ಕವಿಗಳ ಕವಿತೆಗಳನ್ನು ಓದಿ ಹೇಳಬಹುದು. ಅಂತಹ ಮಾದರಿಗಳು ಕೂಡ ಸಂವಾದದಲ್ಲಿ ಚರ್ಚಿತವಾದರೆ ಒಳ್ಳೆಯ ಲಾಭವಾದೀತು. ಎಂಬುದು ನನ್ನ ಅನಿಸಿಕೆ.
ಪಿ. ಎನ್. ಮೂಡಿತ್ತಾಯ
ನಿವೃತ ಪ್ರಾಧ್ಯಾಪಕ, ಲೇಖಕ, ಅನುವಾದಕ, ಸಮನ್ವಯಕಾರ