ಬೆಳಗಾವಿ : ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ, ಕವಯತ್ರಿ ಆಶಾ ಕಡಪಟ್ಟಿಯವರು ದಿನಾಂಕ 07 ನವೆಂಬರ್ 2024ರ ಗುರುವಾರ ನಿಧನರಾದರು. ಇವರು ಕಾವ್ಯ ಕ್ಷೇತ್ರಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದು, ಒಳ್ಳೆಯ ಹಾಡುಗಾರರಾಗಿಯೂ ಗುರುತಿಸಿಕೊಂಡಿದ್ದರು.
ಎರಡು ಕಾದಂಬರಿ, ಎಂಟು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ರಚಿಸಿದ್ದ ಆಶಾರವರು ಸ್ಥಾಪಿಸಿದ್ದ ಜಿಲ್ಲಾ ಲೇಖಕಿಯರ ಸಂಘಕ್ಕೆ ಈಗ 25 ವರ್ಷಗಳಾಗಿವೆ. ಈ ಸಂಘದ ಮೂಲಕ ಜಿಲ್ಲೆಯ ಹಲವು ಲೇಖಕಿಯರನ್ನು, ಕವಯತ್ರಿಯರನ್ನು, ಯುವ ಬರಹಗಾರರನ್ನು ಪ್ರೋತ್ಸಾಹಿಸಿದ್ದರು. ಸರ್ಕಾರದ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟಿನ ಸದಸ್ಯರೂ ಆಗಿದ್ದರು.
ಇಲ್ಲಿನ ಮರಾಠಾ ಲಘು ಪದಾತಿದಳದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಅವರ ಪತಿ ಬಾಲಚಂದ್ರ ಕಡಪಟ್ಟಿಯವರು ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಇವರಿಗೆ ಮಕ್ಕಳು ಇರಲಿಲ್ಲ. ಆಶಾ ಅವರ ಬಯಕೆಯಂತೆ ಅವರ ದೇಹವನ್ನು ಇಲ್ಲಿನ ಡಾ. ರವಿ ಪಾಟೀಲ ಅವರ ಆಸ್ಪತ್ರೆಗೆ ದಾನ ಮಾಡಲಾಯಿತು.