ಗುರುವಾಯನಕೆರೆ : ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 27 ನವೆಂಬರ್ 2025ರಿಂದ ನಾಲ್ಕು ದಿನಗಳ ಕಾಲ ಎಕ್ಸೆಲ್ ಹಬ್ಬ – ಅಕ್ಷರೋತ್ಸವ-2025 ನಡೆಯಿತು.
ಈ ಸಂಭ್ರಮದ ಆರಂಭದ ದಿನ ನಾಡು – ನುಡಿಯ ಅಕ್ಷರೋತ್ಸವ ರಾಷ್ಟ್ರೀಯ ಸಮ್ಮೇಳನದ ಕವಿಗೋಷ್ಠಿಯು ಸುಂದರವಾಗಿ ಮೂಡಿ ಬಂತು. ಸುಗ್ರಾಸ ಭೋಜನದ ತರುವಾಯ, ತಂಪಾದ ವಾತಾವರಣದಲ್ಲಿ 35 ಮಂದಿ ಕವಿಗಳ ಗೋಷ್ಠಿ ನಡೆದರೂ ಸೇರಿದ್ದ ಪ್ರೇಕ್ಷಕರನ್ನು ನಿದ್ದೆ ಕಾಡಲೇ ಇಲ್ಲ. ಕಾಲೇಜಿನ ಕನ್ನಡ ಉಪನ್ಯಾಸಕರು ಅಷ್ಟು ವೈವಿಧ್ಯಮಯವಾಗಿ ಕವಿಗೋಷ್ಠಿಯನ್ನು ಸಂಯೋಜಿಸಿದ್ದರು. ಕವಿಗೋಷ್ಠಿಯ ಆರಂಭದಲ್ಲಿ ಗೋಷ್ಠಿಗೆ ಆಯ್ಕೆಯಾಗಿದ್ದ ಕವಿಯು ತಮ್ಮ ಕವನವನ್ನು ವಾಚಿಸುತ್ತಾರೆ. ಅನಂತರ ಕೆಲವು ರಾಗ ಸಂಯೋಜನೆಗೆ ಹೊಂದಿಕೊಳ್ಳುವ ಕವನಗಳನ್ನು ಸಂಗೀತದೊಂದಿಗೆ ಹಾಡಲಾಯಿತು. ಜತೆಗೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಕೆಲವೊಂದು ಕವನಗಳ ಆಶಯವನ್ನು ಕಾಲೇಜಿನ ಉಪನ್ಯಾಸಕ ಸಂಜೀವ ಕೊಡಗು ಇವರು ಚಿತ್ರ ರಚಿಸುವ ಮೂಲಕ ತಿಳಿಸಿದರು. ಹೀಗೆ ಕವನ ವಾಚನ-ಗಾಯನ-ನೃತ್ಯ-ಕುಂಚ ಸಹಿತವಾದ ವೈವಿಧ್ಯತೆಯಿಂದ ಮೂಡಿ ಬಂದ ಕವಿಗೋಷ್ಠಿಯು ಸೇರಿದ್ದ ಸಾಹಿತ್ಯಾಸಕ್ತರ ಮನ ಗೆದ್ದಿತು. ಸುಮಾರು 4-30 ಗಂಟೆಗಳ ಕಾಲ ನಡೆದ ಕವಿಗೋಷ್ಠಿಯು ಯಾರಿಗೂ ಬೋರ್ ಅನ್ನಿಸಲಿಲ್ಲ.

ಈ ಕವಿಗೋಷ್ಠಿಯಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ ಕವಿಗಳು ತಮ್ಮ ಕಲ್ಪನೆ, ಚಿಂತನೆಗಳನ್ನು ಸಮರ್ಥವಾಗಿ ಮಂಡಿಸಿದರು. ಒಂದು ಕವನವು ಸಂಗೀತ, ಗಾಯನವು ಸೇರಿದಾಗ ಅದ್ಭುತವಾಗಿ ಮೂಡಿ ಬರುತ್ತದೆ ಎಂಬುವುದಕ್ಕೆ ಈ ಕವಿಗೋಷ್ಠಿಯು ಸಾಕ್ಷಿಯಾಯಿತು. ಕಾಲೇಜಿನ ಪ್ರಾಧ್ಯಾಪಕಿ ಅನೂಷಾ ಸೇರಿದಂತೆ ವಿದ್ಯಾರ್ಥಿಗಳು ಹಾಡುಗಳನ್ನು ಹಾಡಿದರು. ಉಪನ್ಯಾಸಕ ರಘು ಮಾಸ್ತರ್ ಇವರ ನಿರ್ದೇಶನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ವಿವೇಕ ಬಾಳಿಗ (ತಬಲಾ), ಕಮಲಾಕ್ಷ ಗುಡಿಗಾರ್ (ಕೀಬೋರ್ಡ್) ಸಹಕರಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಕವಿಗೋಷ್ಠಿಗೆ ಕಿವಿಯಾದರು. ಇದೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕವಿಗಳಾಗಿ ವೇದಿಕೆ ಏರಿದರೆ, ಈ ಕವಿಗೋಷ್ಠಿಯು ಇನ್ನಷ್ಟೂ ಸಾರ್ಥಕವಾಗುತ್ತದೆ. ಕಾಲೇಜಿನ ಅಧ್ಯಕ್ಷರಾದ ಬಿ. ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರಾದ ಡಾ. ನವೀನ್ ಕುಮಾರ ಮರಿಕೆ ಹಾಗೂ ಡಾ. ಪ್ರಜ್ವಲ್ ಕಜೆ ಇವರ ಉಸ್ತುವಾರಿಕೆಯಲ್ಲಿ ಕವಿಗೋಷ್ಠಿ ನಡೆಯಿತು.
