ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಹಾಗೂ ದ.ಕ. ಜಿಲ್ಲಾ ಸಮಿತಿ ವತಿಯಿಂದ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಸಹಯೋಗದಲ್ಲಿ ಮತದಾನ ಪ್ರದಾನ ಕವಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ದಿನಾಂಕ 20-04-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಅವರು “ಮತದಾನ ಮಾಡುವುದು ನಮ್ಮ ಹಕ್ಕು. ಯಾವುದೇ ಆಮಿಷ, ಪ್ರಭಾವಕ್ಕೆ ಒಳಗಾಗದೆ ಯೋಗ್ಯರನ್ನು ಜನಪ್ರತಿನಿಧಿಯಾಗಿ ಆರಿಸಬೇಕು. ಇದರಿಂದ ನಾಡಿನ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಸಾಧ್ಯವಾಗುತ್ತದೆ. ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಆಯ್ಕೆ ಮಾಡುವ ಮುಕ್ತ ಸ್ವಾತಂತ್ರ್ಯ ಮತದಾರನಿಗೆ ಇದೆ. ಹಾಗಾಗಿ ಮತದಾನ ಬಹಿಷ್ಕಾರ, ನೋಟಾ ಚಲಾವಣೆ ನಿರ್ಧಾರ ಸಲ್ಲದು” ಎಂದು ಹೇಳಿದರು.
ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸಂಜೀವ ರೈ, ಅಭಾಸಾಪ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ದ.ಕ. ಜಿಲ್ಲಾ ಅಭಾಸಾಪ ಆಯೋಜಿಸಿದ ಅಯೋಧ್ಯೆಯಲ್ಲಿ ರಾಮಮಂದಿರ, ಮನೆಮನಗಳಲ್ಲಿ ರಾಮಚಂದಿರ ಕವಿತಾ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ನಾರಾಯಣ ರೈ ಕುಕ್ಕುವಳ್ಳಿ ಸಂಪಾದಕತ್ವದ ‘ಮಧುಪ್ರಪಂಚ’ ಪತ್ರಿಕೆಯ ನೂತನ ಸಂಚಿಕೆಯ ಬಿಡುಗಡೆ ನೆರವೇರಿತು.
ರಾಮಕೃಷ್ಣ ಕಾಲೇಜಿನ ಕನ್ನಡ ಪ್ರಾಧ್ಯಾಪಕ ನಟೇಶ್ ಆಳ್ವ, ದ.ಕ. ಜಿಲ್ಲಾ ಅಭಾಸಾಪ ಪ್ರಧಾನ ಕಾರ್ಯದರ್ಶಿ ಪರಿಮಳ ರಾವ್ ಉಪಸ್ಥಿತರಿದ್ದರು. ಅಭಾಸಾಪ ಮಂಗಳೂರು ತಾಲೂಕು ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್ ವಂದಿಸಿದರು. ಉಪಾಧ್ಯಕ್ಷ ಚಂದ್ರಹಾಸ ಕಣಂತೂರು ಕಾರ್ಯಕ್ರಮ ನಿರೂಪಿಸಿದರು. 30ಕ್ಕೂ ಅಧಿಕ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.