ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯೂಕೇಶನಲ್ ಇದರ ವತಿಯಿಂದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22-06-2024ರಂದು ಬೆಳಗ್ಗೆ 10-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಆರ್.ಆರ್.ಸಿ. ದ್ವನ್ಯಾಲೋಕದಲ್ಲಿ ಆಯೋಜಿಸಲಾಗಿದೆ.
ತುಳು ಭಾಷೆ ಹಾಗೂ ಸಂಸ್ಕೃತಿ ಚಿಂತಕ ಶ್ರೀ ಬೆನೆಟ್ ಜಿ. ಅಮ್ಮನ್ನ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ವಹಿಸಲಿದ್ದು, ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ‘ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳು’ ಎಂಬ ವಿಷಯದ ಬಗ್ಗೆ ಇತಿಹಾಸ ಸಹಪ್ರಾಧ್ಯಾಪಕರಾದ ಡಾ. ರಾಮದಾಸ ಪ್ರಭು ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಪೊಳಲಿ ಶೀನಪ್ಪ ಹೆಗ್ಗಡೆ :
ಪೊಳಲಿ ಶೀನಪ್ಪ ಹೆಗ್ಡೆಯವರೆಂದೇ ಪ್ರಸಿದ್ಧರಾದ ನಂದಳಿಕೆ ಅಮುಣಂಜೆ ಗುತ್ತು ಶೀನಪ್ಪ ಹೆಗ್ಗಡೆಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಗಾಂಧೀಜಿ ಚಳುವಳಿಯಲ್ಲಿ ಹಲವಾರು ಬಾರಿ ಕಾರಾಗೃಹ ವಾಸವನ್ನು ಅನುಭವಿಸಿದವರು. ಶ್ರೀಯುತರ ಹಲವಾರು ಕೃತಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳಪಾಂಡ್ಯ ರಾಯನ ಅಳಿಯ ಕಟ್ಟು’ ಮುಖ್ಯವಾದುದು ಮತ್ತು ಇದು ತುಳುನಾಡಿನ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕೃತಿ ಎಂದು ಗುರುತಿಸಲ್ಪಡುತ್ತದೆ. ಅವರ ಇನ್ನಿತರ ಕೃತಿಗಳೆಂದರೆ ‘ಶ್ರೀನಿವಾಸ ಲಿಪಿ’, ‘ಅಕ್ಕರಸು ಪೂಂಜೆದಿ’, ‘ತುಳುನಾಡ ಸಿರಿಯ ಕತೆ’, ‘ಪ್ರಾಚೀನ ತುಳುನಾಡು’ ಹಾಗೂ ಹೆಗ್ಡೇರ ತುಳುನಾಡು’.
ಎಸ್.ಆರ್. ಹೆಗ್ಡೆ :
ಮಂಗಳೂರು ತಾಲೂಕಿನ ಚೇಳ್ಯಾರು ಗುತ್ತು ಎಂಬಲ್ಲಿ ಜನಿಸಿದ ಪೊಳಲಿ ಶೀನಪ್ಪ ಹೆಗ್ಗಡೆಯವರ ಮಗ ಸೀತಾರಾಮ ಹೆಗ್ಡೆಯವರು ಎಸ್.ಆರ್. ಹೆಗ್ಡೆ ಎಂದೇ ಪರಿಚಿತರು. ಇವರು ಮಡದಿ ಇಂದಿರಾ ಹೆಗ್ಡೆಯವರೊಂದಿಗೆ ಸೇರಿ ರಚಿಸಿದ ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಕೃತಿ ವಿದ್ವಾಂಸರ ಮೆಚ್ಚುಗೆ ಗಳಿಸಿದೆ. ಇವರು ಸೈನಿಕರಾಗಿ, ಪತ್ರಿಕಾ ನಿರ್ವಹಣಾಧಿಕಾರಿಯಾಗಿ, ತುಳುಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಜಂಟಿ ಹೆಸರಲ್ಲಿ ಈ ಪ್ರಶಸ್ತಿ ನೀಡಲ್ಪಡುತ್ತದೆ.
ಪ್ರಶಸ್ತಿ ಪುರಸ್ಕೃತರು : ಶ್ರೀ ಬೆನೆಟ್ ಜಿ. ಅಮ್ಮನ್ನ :
ಶ್ರೀ ಬೆನೆಟ್ ಜಿ. ಅಮ್ಮನ್ನ ಉಡುಪಿ ತಾಲೂಕಿನ ಪಾಂಗಾಳದವರು. 30 ವರ್ಷಗಳ ಕಾಲ ಮಂಗಳೂರಿನ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪತ್ರಾಗಾರ ವಿಭಾಗದಲ್ಲಿ ಪತ್ರಾಗಾರ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ತುಳುನಾಡಿನ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ವಿದೇಶಿಯರ ಕೊಡುಗೆಗಳು, ತುಳುನಾಡು ಚರಿತ್ರೆ ಇವರ ಆಸಕ್ತಿಯ ಕ್ಷೇತ್ರಗಳು. ಇದಕ್ಕೆ ಸಂಬಂಧಿಸಿದ ಸಂಶೋಧನೆ, ದಾಖಲೀಕರಣ, ಹಸ್ತಪ್ರತಿ ಸಂರಕ್ಷಣೆ, ಭಾಷಾಂತರ ಮೊದಲಾದ ಕ್ಷೇತ್ರಗಳಲ್ಲಿ ಇವರು ಕೊಡುಗೆಯನ್ನು ನೀಡಿದ್ದಾರೆ. ಚಿಗುರಿದ ಬದುಕು (ಕಿರು ಕಾದಂಬರಿ), ಕ್ರೈಸ್ತರು ಮತ್ತು ಬಾಸೆಲ್ ಮಿಶನ್, ಜಾನ್ ಜೇಮ್ಸ್ ಬ್ರಿಗೆಲ್ ಬದ್‌ಕ್ ಬೊಕ್ಕ ಬರವು, ಕಾರ್ಕಳದಲ್ಲಿ ಕ್ರೈಸ್ತರು-ಒಂದು ಅಧ್ಯಯನ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೋಟಿಚೆನ್ನಯ, ಅಪ್ರಕಟಿತ ತುಳು ಪಾಡ್ಡನಗಳು, ತುಳು ವಿಕ್ರಮಾರ್ಕ ಕಥೆ, ತುಳು ಪಂಚತಂತ್ರ, ತುಳುಗಾದೆಗಳು ಮುಂತಾದ ಪುಸ್ತಕಗಳನ್ನು ಇತರರೊಂದಿಗೆ ಸಂಪಾದಿಸಿದ್ದಾರೆ. ಸಂಪಾದಕರಾಗಿಯೂ ಕಾರ್ಯವೆಸಗಿದ್ದಾರೆ.