ಕಾಸರಗೋಡು : ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ – ಕಾಸರಗೋಡು ಕನ್ನಡ ಗ್ರಾಮೋತ್ಸವದ ಪೋಸ್ಟರ್ ದಿನಾಂಕ 21 ಸೆಪ್ಟೆಂಬರ್ 2024ರಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಇವರಿಂದ ಬಿಡುಗಡೆಗೊಂಡಿತು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನಾಚರಣೆ ಮತ್ತು ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವ-2025 ಒಂದು ದಿನ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 04 ನವೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ಕೇರಳ-ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವದೊಂದಿಗೆ ಆಚರಿಸಲಾಗುವುದು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಸೂರ್ಯೋದಯದಿಂದ ಸುಪ್ರಭಾತ ಗಾಯನದೊಂದಿಗೆ, ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಭುವನೇಶ್ವರಿಯ ಛಾಯಾಚಿತ್ರದ ಅನಾವರಣದೊಂದಿಗೆ ಕನ್ನಡಮ್ಮನ ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ಅವರ 60ನೇ ಜನ್ಮದಿನೋತ್ಸವ ಷಷ್ಟಬ್ಧಿ ಸಂಭ್ರಮದ, ಧಾರ್ಮಿಕ ಸಂಪ್ರದಾಯದ ಪೂಜೆ ಪುರಸ್ಕಾರದ ಆಚರಣೆಯೊಂದಿಗೆ ಶುಭಾರಂಭಗೊಳ್ಳಲಿದೆ.
ಬೆಳಗ್ಗೆ ಗಂಟೆ 11-00ಕ್ಕೆ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಕನ್ನಡ ಕವಿಗೋಷ್ಠಿ ನಡೆಯಲಿದೆ. ಕಾಸರಗೋಡು ಕನ್ನಡಿಗ – ಗಡಿನಾಡು- ಹೊರನಾಡು ಕನ್ನಡಿಗ- ಕರ್ನಾಟಕ ಸರಕಾರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಕೇರಳ ಕರ್ನಾಟಕ ರಾಜ್ಯದ 60 ಭಜನಾ ಸಂಕೀರ್ತನಾ ತಂಡಗಳ ಗಾಯಕ ಗಾಯಕಿಯರಿಂದ ಸಮೂಹ ದಾಸ ಸಂಕೀರ್ತನಾ ಗಾಯನೋತ್ಸವವನ್ನು ಏರ್ಪಡಿಸಲಾಗಿದೆ.
ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಒತ್ತಾಯಿಸಿ ನಿರಂತರವಾಗಿ ದುಡಿದು, ಸೇವೆ ಸಲ್ಲಿಸಿ ಕೀರ್ತಿಶೇಷರಾದ 60 ಮಂದಿ ಕನ್ನಡ ಸತ್ಯಾಗ್ರಹಿಗಳು, ಕನ್ನಡ ಕಟ್ಟಾಳುಗಳು, ಕನ್ನಡ ಹೋರಾಟಗಾರರು, ಕನ್ನಡ ಸಂಘಟನೆಗಳ ಮುಖಂಡರು, ಕನ್ನಡದ ರಾಜಕೀಯ ಪಕ್ಷದ ನೇತಾರರ ಭಾವಚಿತ್ರವನ್ನು ಸಂಗ್ರಹಿಸಿ ಕನ್ನಡ ಗ್ರಾಮದಲ್ಲಿ ಪುಷ್ಪನಮನಗಳನ್ನು ಸಲ್ಲಿಸಲಾಗುವುದು ಹಾಗೂ ಅವರ ಕುಟುಂಬಸ್ಥರ ಪರವಾಗಿ ಓರ್ವ ಪ್ರತಿನಿಧಿಯನ್ನು ಆಮಂತ್ರಿಸಿ ಒಟ್ಟು 60 ಮಂದಿಗೆ ಗೌರವಾರ್ಪಣೆ -ನುಡಿನಮನಗಳನ್ನು ಸಲ್ಲಿಸಲಾಗುವುದು. ದೇಶ ವಿದೇಶಗಳ 60 ಮಂದಿ ಕನ್ನಡ ಸಾಂಸ್ಕೃತಿಕ ರಾಯಭಾರಿಗಳು ಹಾಗೂ ಕನ್ನಡದ ಸಾಧಕರಿಗೆ ಶಿವರಾಮ ಕಾಸರಗೋಡು ಸ್ಥಾಪಕ ಅಧ್ಯಕ್ಷರಾಗಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ‘ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಅಪರಾಹ್ನ ಗಂಟೆ 4-00ಕ್ಕೆ ಕರ್ನಾಟಕ ಸರಕಾರದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನಾಚರಣೆಯ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಶಿವರಾಮ ಕಾಸರಗೋಡು -60 ಅಭಿನಂದನಾ ಕೃತಿ ಬಿಡುಗಡೆಗೊಳ್ಳಲಿದೆ. ಸಮಾರಂಭದಲ್ಲಿ ಕೇರಳ- ಕರ್ನಾಟಕ ರಾಜ್ಯ ಸರಕಾರದ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಹಾಗೂ ಸರಕಾರದ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪ್ರಾಧಿಕಾರಗಳು, ಅಕಾಡೆಮಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮಠಾಧೀಶರು, ಸ್ವಾಮೀಜಿಗಳು, ಪೀಠಾಧಿಪತಿಗಳು ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶೀರ್ವದಿಸಲಿದ್ದಾರೆ.