ಮಂಗಳೂರು : ಕಾರ್ತಿಕ್ ಭಟ್ ಮತ್ತು ಸಿನಿಸೋಲ್ಸ್ ಬೆಂಗಳೂರು ವತಿಯಿಂದ ಬಹುಶ್ರುತ ವಿದ್ವಾಂಸ, ಹಿರಿಯ ಕಲಾವಿದ ಹಾಗೂ ಲೇಖಕರಾದ ಡಾ. ಎಂ. ಪ್ರಭಾಕರ ಜೋಶಿ ಇವರ ಜೀವನ ಸಾಧನೆಗಳ ದಾಖಲೀಕರಣ ‘ಪ್ರಭಾಕರ ಚಿತ್ರ’ 30 ನಿಮಿಷಗಳ ಚಲನಚಿತ್ರದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-4-2024ರ ಸೋಮವಾರದಂದು ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು.
ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ‘ಪ್ರಭಾಕರ ಜೋಶಿ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡ ಒಬ್ಬ ಬಹುಶ್ರುತ, ಸರ್ವ ಸಾಧಕ. ಯುವಕರೆಲ್ಲರೂ ಸೇರಿಕೊಂಡು ಮಹಾಸಾಧಕನ ಜೀವನವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹಾತ್ಕಾರ್ಯ ಮಾಡಿದ್ದಾರೆ. ಇದು ಇಲ್ಲಿಗೆ ಮುಗಿಯದೆ ಇನ್ನು ಇದರ ಮುಂದುವರಿದ ಭಾಗ ಬರಲಿ. ಏಕೆಂದರೆ ಜೋಶಿಯವರ ಸಾಧನೆ ವ್ಯಾಪಕವಾದುದು.” ಎಂದರು.
ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಹಿರಿಯ ಕಲಾವಿದ ಪ್ರಭಾಕರ್ ಜೋಶಿ, ಯಕ್ಷಗಾನ ಜಾಲತಾಣದ ಪೋಷಕ ಪಣಂಬೂರು ವಾಸುದೇವ ಐತಾಳ, ಚಿತ್ರ ನಿರ್ದೇಶಕ ಜಿ. ಅಭಯ ಸಿಂಹ, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಭಟ್ ಉಪಸ್ಥಿತರಿದ್ದರು. ಸುಮನಾ ಘಾಟೆ ಕಾರ್ಯಕ್ರಮ ನಿರೂಪಿಸಿದರು.