ಧಾರವಾಡ : ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಇದರ ವತಿಯಿಂದ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ಜನ್ಮ ದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತೋತ್ಸವ -2023 ಕಾರ್ಯಕ್ರಮವು ದಿನಾಂಕ 31-12-2023ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಭಾರತ ಸರ್ಕಾರದ ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿಯವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಎಸ್. ಲಾಡ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಮುಂಜಾನೆ 9.30ಕ್ಕೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಚೇರಿಯಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಧಾರವಾಡದ ಶ್ರೀಮತಿ ಅಕ್ಕಮಹಾದೇವಿ ಆಲೂರ, ಹುಬ್ಬಳ್ಳಿ ಡಾ. ಚಂದ್ರಿಕಾ ಕಾಮತ್, ಉಜಿರೆ ಡಾ. ಮಿಥುನ ಚಕ್ರವರ್ತಿ ಇವರುಗಳ ಹಾಡುಗಾರಿಕೆಗೆ ಡಾ. ಪರಶುರಾಮ ಶರಣಪ್ಪ ಕಟ್ಟಿಸಂಗಾವಿ ಧಾರವಾಡ ಹಾರ್ಮೋನಿಯಂ ಮತ್ತು ಪಂ. ಅಲ್ಲಮಪ್ರಭು ಕಡಕೋಳ ಸವದತ್ತಿ ತಬಲಾದಲ್ಲಿ ಸಾಥ್ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ನಡೆಯಲಿರುವ ಸಂಗೀತೋತ್ಸವದಲ್ಲಿ ಗದಗದ ಶ್ರೀ ವೆಂಕಟೇಶ ಆಲಕೋಡ ಇವರ ಗಾಯನ ಕಾರ್ಯಕ್ರಮಕ್ಕೆ ಗದಗದ ಶ್ರೀ ರಾಮ ಕೊಡಿಕಲ್ಲ ಇವರು ಹಾರ್ಮೋನಿಯಂನಲ್ಲಿ ಮತ್ತು ಧಾರವಾಡದ ಶ್ರೀ ಶ್ರೀಧರ ಮಾಂಡ್ರೆ ಇವರು ತಬಲಾದಲ್ಲಿ ಸಾಥ್ ನೀಡಲಿದ್ದಾರೆ. ಧಾರವಾಡದ ಪಂ. ರವಿಕಿರಣ ನಾಕೋಡ ಇವರ ತಬಲಾ ಸೋಲೊಗೆ ಧಾರವಾಡದ ಶ್ರೀ ಶಂಕರ ಕಬಾಡಿ ಪಿಟೀಲು ವಾದನ ಮಾಡಲಿದ್ದಾರೆ. ಪುಣೆಯ ಪಂ. ವಿದ್ಯಾಧರ ವ್ಯಾಸ್ ಇವರ ಗಾಯನ ಕಾರ್ಯಕ್ರಮಕ್ಕೆ ಧಾರವಾಡದ ಶ್ರೀ ಗುರುಪ್ರಸಾದ ಹೆಗಡೆ ಇವರು ಹಾರ್ಮೋನಿಯಂನಲ್ಲಿ ಮತ್ತು ಧಾರವಾಡದ ಪಂ. ರಘುನಾಥ ನಾಕೋಡ ಇವರು ತಬಲಾದಲ್ಲಿ ಸಾಥ್ ನೀಡಲಿದ್ದಾರೆ.
ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ :
ಧಾರವಾಡ ಜಿಲ್ಲೆಯು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವರಕವಿ ಡಾ. ದ.ರಾ. ಬೇಂದ್ರೆ, ಡಾ. ಗಿರೀಶ ಕಾರ್ನಾಡ್, ಸಂಗೀತ ಕ್ಷೇತ್ರದಲ್ಲಿ ಗಾನವಿದುಷಿ ಡಾ. ಗಂಗೂಬಾಯಿ ಹಾನಗಲ್, ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಹೀಗೆ ಅನೇಕ ದಿಗ್ಗಜರು ಜನಿಸಿದ ಈ ಜಿಲ್ಲೆಯಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಡಾ. ಮಲ್ಲಿಕಾರ್ಜುನ ಮನಸೂರ ಅವರು ಡಿಸೆಂಬರ್ 31, 1910ರಂದು ಧಾರವಾಡ ತಾಲೂಕು ಮನಸೂರಿನಲ್ಲಿ ಜನಿಸಿದರು.
ಡಾ. ಮಲ್ಲಿಕಾರ್ಜುನ ಮನಸೂರ ಅವರು ಚಿಕ್ಕ ವಯಸ್ಸಿನಲ್ಲಿ ನಾಟಕ ಕಂಪನಿಯಲ್ಲಿ ಇರುವಾಗ, ಅವರ ಅದ್ಭುತ ಹಾಡುಗಾರಿಕೆಯನ್ನು ಗುರುತಿಸಿ, ಶ್ರೀ ನೀಲಕಂಠ ಬುವಾ ಮಿರಜಕರ್ ಅವರು ಮಿರಜ್‌ಗೆ ಕರೆದುಕೊಂಡು ಹೋಗಿ, ಸಂಗೀತ ಕಲಿಸಿದರು, ಸತತ ಪರಿಶ್ರಮದಿಂದ ಸಂಗೀತದಲ್ಲಿ ಅಪಾರವಾದ ಸಾಧನೆ ಮಾಡಿದವರು ಡಾ. ಮಲ್ಲಿಕಾರ್ಜುನ ಮನಸೂರ ಅವರು.
ಡಾ. ಮಲ್ಲಿಕಾರ್ಜುನ ಮನಸೂರ ಅವರು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ, 1962ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, 1968ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1970ರಲ್ಲಿ ಪದ್ಮಶ್ರೀ ಪ್ರಶಸ್ತಿ, 1972ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 1976ರಲ್ಲಿ ಪದ್ಮಭೂಷಣ ಪ್ರಶಸ್ತಿ, 1981ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ ಹಾಗೂ 1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಸಂಗೀತ ದಿಗ್ಗಜರು.
ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರ ಸಂಗೀತ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟನ್ನು ದಿನಾಂಕ 180-02-1997ರಂದು ರಚಿಸಿದೆ. ಟ್ರಸ್ಟ್ ವತಿಯಿಂದ ಡಾ. ಮಲ್ಲಿಕಾರ್ಜುನ ಮನಸೂರ ಅವರು ವಾಸಿಸುತ್ತಿದ್ದ ಮನೆಯನ್ನು ನವೀಕರಿಸಿ, ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಇಲ್ಲಿ ಹಿಂದೂಸ್ತಾನಿ ಸಂಗೀತ ಪಾಠಶಾಲೆಯನ್ನು ನಡೆಸಲಾಗುತ್ತಿದೆ.
ಪಂ. ವಿದ್ಯಾಧರ ವ್ಯಾಸ್ ಪುಣೆ :
ಪಂ. ವಿದ್ಯಾಧರ ವ್ಯಾಸ್ ಎಂಬ ಹೆಸರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಹೆಸರುವಾಸಿಯಾಗಿದೆ. ಶ್ರೀಯುತರು 1944ರಲ್ಲಿ ಮುಂಬೈನ ಪ್ರಗತಿಪರ ಚಿಂತನೆಯುಳ್ಳ ಕುಟುಂಬದಲ್ಲಿ ಜನಿಸಿದರು. ಪಂ. ವಿದ್ಯಾಧರ ವ್ಯಾಸ್ ಇವರ ತಂದೆ ಗಾಯನಾಚಾರ್ಯ ಪಂ. ನಾರಾಯಣ ರಾವ್ ವ್ಯಾಸ್ ಅವರು ದೇಶ ವಿಖ್ಯಾತ ಗ್ವಾಲಿಯರ್ ಘರಾಣೆಯ ಸಂಗೀತ ಮಹರ್ಷಿ ಪಂ. ವಿಷ್ಣು ದಿಗಂಬರ್ ಪಲುಸ್ಕರ್ ಅವರ ಶಿಷ್ಯರಲ್ಲಿ ಪ್ರಮುಖರು. ಇಂತಹ ಉನ್ನತವಾದ ಸಂಗೀತ ಪರಂಪರೆಯಲ್ಲಿ ಪಂ. ವಿದ್ಯಾಧರ ವ್ಯಾಸ್ ಇವರು ಖಯಾಲ್, ತರಾನಾ ಹಾಗೂ ಭಜನ್ ಗಾಯಕಿಯ ತಾಲೀಮನ್ನು ಪಡೆದರು. ಕಠಿಣ ಪರಿಶ್ರಮ, ಅಸಾಧಾರಣ ಬುದ್ಧಿಮತ್ತೆ ಹಾಗೂ ಸತತ ಸಾಧನೆಯ ಬಲದಿಂದ ವಿಶಿಷ್ಟವಾದ ಶೈಲಿಯನ್ನು ಮೈಗೂಡಿಸಿಕೊಂಡು, ತಮ್ಮ ಸುಶ್ರಾವ್ಯ ಕಂಠದಿಂದ ಇಂದು ರಾಗ ರಸಭಾವವನ್ನು ಕೇಳುಗರಿಗೆ ಉಣಬಡಿಸುತ್ತಿದ್ದಾರೆ. ಇವರು ಸಂಯೋಜಿಸಿದ ಅನೇಕ ಖಯಾಲ್ ಮತ್ತು ತರಾನಾಗಳು ಜನಮಾನಸದಲ್ಲಿ ಅಚ್ಚೋತ್ತಿವೆ. ಪಂ. ವಿದ್ಯಾಧರ ವ್ಯಾಸ್ ಅವರು ‘ಟಾಪ್ ಗ್ರೇಡ್’ ಮಾನ್ಯತೆಯನ್ನು ಹೊಂದಿದವರು. ದೂರದರ್ಶನದಲ್ಲಿ ಜನಜನಿತರು. ದೇಶದ ಪ್ರತಿಷ್ಠಿತ ಧ್ವನಿ ಮುದ್ರಣ ಕಂಪನಿಗಳು ಇವರ ಸಂಗೀತ ಸುಧೆಯನ್ನು ಎಲ್ಲೆಡೆ ಪಸರಿಸಿವೆ. ‘ರಾಗ ಗೈಡ್’ ಎನ್ನುವ ಇವರ ಗ್ರಂಥ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. 75ನೇ ವರ್ಷದ ಭಾರತ ಸ್ವಾತಂತ್ರ್ಯ ಮಹೋತ್ಸವದ ವಿಶೇಷ ಕಾರ್ಯಕ್ರಮದಡಿಯಲ್ಲಿ ಫಿನ್ಲ್ಯಾಂಡ್ ಸರ್ಕಾರ ಪಂ. ವಿದ್ಯಾಧರ ವ್ಯಾಸ್ ಇವರನ್ನು ಸಂಗೀತ ಗೋಷ್ಠಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.
ಪಂ. ವಿದ್ಯಾಧರ ವ್ಯಾಸ್ ಅವರು ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯಿಂದ ‘ಸಂಗೀತಾಚಾರ್ಯ’ ಎಂಬ ಬಿರುದನ್ನು ಪಡೆದಿದ್ದಾರೆ. ಐ.ಸಿ.ಎಸ್.ಎಸ್.ಆರ್. ನವದೆಹಲಿಯ ಸೀನಿಯರ್ ಫೆಲೋಷಿಪ್, ಇಂದಿರಾ ಕಲಾ ಸಂಗೀತ ವಿದ್ಯಾಲಯ, ಕೈರಾಘರ್ ಇಲ್ಲಿನ ಗೌರವ ಡಾಕ್ಟರೇಟ್ ಪದವಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರು ಸಂಗೀತ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಪಠ್ಯಕ್ರಮದ ಅಧ್ಯಕ್ಷರಾಗಿ, ಲಕ್ನೋದ ಭಾತಖಂಡೆ ಸಂಗೀತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ಕಲಾ ರತ್ನ, ಸಂಗೀತ ಭುವನ ಭಾಸ್ಕರ ಸಮ್ಮಾನ, ಆಚಾರ್ಯ ಬೃಹಸ್ಪತಿ ಸಂಗೀತ ಸೇವಾ ಸಮ್ಮಾನ, ನವರಸ ಸಂಗೀತ ವಾಚಸ್ಪತಿ, ಸ್ವರ ಸಾಗರ ಸಂಗೀತ ಪುರಸ್ಕಾರ, ಪುಟ್ಟರಾಜ ಗವಾಯಿ ಸಮ್ಮಾನ, ಉಸ್ತಾದ್ ಚಾಂದ್ ಖಾನ್ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ ಇವರ ಸಾಧನೆಗೆ ಮುಕುಟ ಪ್ರಾಯವಾಗಿವೆ. ಇವರ ಸಂಗೀತ ಮಹಾ ಸಾಧನೆಯನ್ನು ಗುರುತಿಸಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಧಾರವಾಡ ವತಿಯಿಂದ 2023ನೇ ಸಾಲಿನ ‘ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿ, ಗೌರವಿಸಲಾಗುತ್ತಿದೆ.
ಪಂ. ಡಾ. ರವಿಕಿರಣ ನಾಕೋಡ ಧಾರವಾಡ :
ಪಂ. ಡಾ. ರವಿಕಿರಣ ನಾಕೋಡ ಅವರು ಧಾರವಾಡ ಜಿಲ್ಲೆಯ ಖ್ಯಾತ ಸಂಗೀತಗಾರರ ಮನೆತನದಲ್ಲಿ ಹುಟ್ಟಿದವರು. ಅವರ ಅಜ್ಜನವರಾದ ಪಂ. ಅರ್ಜುನಸಾ ನಾಕೋಡ ಅವರು ಖ್ಯಾತ ಕಿರಣಾ ಹಾಗೂ ಗ್ವಾಲಿಯರ್ ಘರಾಣೆಯ ಸಂಗೀತಗಾರರಾಗಿದ್ದರು. ಇವರ ತಂದೆಯವರು ಪಂ. ರಘುನಾಥ್ ನಾಕೋಡರವರು ಖ್ಯಾತ ಅಂತರರಾಷ್ಟ್ರೀಯ ತಬಲಾ ಕಲಾವಿದರು ಹಾಗೂ ಇವರ ತಾಯಿ ವಿದುಷಿ ರೇಣುಕಾ ನಾಕೋಡರವರು ಖ್ಯಾತ ಹಿಂದೂಸ್ತಾನಿ ಸಂಗೀತಗಾರರು. ರವಿಕಿರಣ ನಾಕೋಡರವರು ಬಾಲ್ಯದಿಂದಲೇ ತಬಲಾ ವಾದ್ಯ ಕಲಿಯಲು ಆಸಕ್ತಿ ತೋರಿ, ತಮ್ಮ ತಂದೆಯವರಾದ ಪಂ. ರಘುನಾಥ ನಾಕೋಡ ಇವರಲ್ಲಿ ಕಲಿತರು.
ಪಂ.ಡಾ. ರವಿಕಿರಣ ನಾಕೋಡ ಇವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಪ್ರತಿಭಾ ಪುರಸ್ಕಾರ’ ಪಡೆದರು ಸ್ನಾತಕೊತ್ತರ ಸಂಗೀತ ಪದವಿ ನಂತರ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕರ್ನಾಟಕದಲ್ಲಿಯೇ ಪಿ.ಎಚ್.ಡಿ. ಪದವಿ ಪಡೆದ ಮೊದಲಿಗರಾಗಿರುತ್ತಾರೆ. ಧಾರವಾಡ ಆಕಾಶವಾಣಿಯಿಂದ “ಎ” ಗ್ರೇಡ್ ಮಾನ್ಯತೆ, ಆಕಾಶವಾಣಿಯ ‘ಟಾಪ್ ಗ್ರೇಡ್’ ಹಾಗೂ ಡಾಕ್ಟರೇಟ್ ಪದವಿ ಪಡೆದ ಪ್ರಥಮ ತಬಲಾ ವಾದ್ಯ ಕಲಾವಿದರಾಗಿರುತ್ತಾರೆ. ಇವರು ಅನೇಕ ಸಂಗೀತ ದಿಗ್ಗಜರಿಗೆ ತಬಲಾ ಸಾಥ್ ನೀಡಿರುತ್ತಾರೆ. ಅವರಲ್ಲಿ ಪ್ರಮುಖರೆಂದರೆ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳು, ಪಂ. ರಾಜಶೇಖರ ಮನಸೂರ, ಪಂ.ಎಂ. ವೆಂಕಟೇಶ ಕುಮಾರ, ಪಂ. ಕೈವಲ್ಯ ಕುಮಾರ ಗುರವ, ಉಸ್ತಾದ್ ಶಾಹಿದ್ ಪರ್ವೇಜ್, ಡಾ.ಎನ್. ರಾಜಮ್ಮ, ಪಂ. ಬಿ.ಎಸ್. ಮಠ ಮುಂತಾದವರು. ಇವರು ರಾಷ್ಟ್ರೀಯ ಆಕಾಶವಾಣಿಯ ಸಂಗೀತ ಸಮ್ಮೇಳನಗಳಲ್ಲಿ ತಬಲಾ ಸ್ವತಂತ್ರ ವಾದನ ಕಾರ್ಯಕ್ರಮ ನೀಡಿದ್ದಾರೆ. ಪ್ರಸ್ತುತ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇಲ್ಲಿ ಸಂಗೀತ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಂ.ಡಾ. ರವಿಕಿರಣ ನಾಕೋಡ ಅವರು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಧಾರವಾಡ ವತಿಯಿಂದ 2023ನೇ ಸಾಲಿನ ‘ರಾಷ್ಟ್ರೀಯ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.
ಪಂ. ವೆಂಕಟೇಶ ಆಲಕೋಡ, ಗದಗ :
ಪಂ. ವೆಂಕಟೇಶ ಆಲಕೋಡ ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲಕೋಡದವರು. ಒಕ್ಕಲುತನ ಕುಟುಂಬದ ಶ್ರೀ ಸಿದ್ರಾಮಪ್ಪ ಮತ್ತು ಶ್ರೀಮತಿ ಮಲ್ಲಮ್ಮ ಇವರ ಸುಪುತ್ರರಾದ ಇವರಿಗೆ ಚಿಕ್ಕಂದಿನಿಂದಲೇ ಸಂಗೀತದ ಕಡೆಗೆ ಸೆಳೆತವಾಗಿರುತ್ತದೆ. ಇವರು ಹನ್ನೊಂದು ವರ್ಷದವರಿದ್ದಾಗ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಯಲು ಪ್ರಾರಂಭಿಸಿ, ಆಶ್ರಮದ ನಿಯಮದ ಪ್ರಕಾರ 8 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಪದ್ಮಭೂಷಣ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಾನಿಧ್ಯದಲ್ಲಿ 5 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಗುರುಗಳ ಜೊತೆಯಲ್ಲಿ ಹಲವಾರು ವೇದಿಕೆಗಳಲ್ಲಿ ಹಾಡಿ, ಸಂಗೀತ ಪ್ರಿಯರಿಂದ ಮೆಚ್ಚುಗೆ ಪಡೆದಿದ್ದಾರೆ. ಪಂ. ವೆಂಕಟೇಶ ಆಲಕೋಡ ಅವರು ಸಂಗೀತದಲ್ಲಿ ಪದವಿ ಪಡೆದು, ಆಕಾಶವಾಣಿ ದೂರದರ್ಶನದ “ಎ” ಗ್ರೇಡ್ ಕಲಾವಿದರಾಗಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಲ್ಲಿ ಇವರ ಗಾಯನದ ಕಾರ್ಯಕ್ರಮಗಳು ಮೂಡಿಬಂದಿರುತ್ತವೆ. ವಿಶೇಷವೆಂದರೆ ಇವರು ಒಬ್ಬ ಅದ್ಭುತ ರಾಗ ಸಂಯೋಜಕರು ಹಾಗೂ ಸಂಗೀತ ನಿರ್ದೆಶಕರು. ಇವರು ಮಸ್ಕತ್ ಕನ್ನಡ ಸಂಘ, ಬೆಹರಿನ್ ಕನ್ನಡ ಸಂಘಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ನಾಗಪೂರ ಉತ್ಸವ, ದೆಹಲಿ ಕನ್ನಡ ಸಂಘ, ಪುಟ್ಟರಾಜ ಗವಾಯಿ ಸಮಿತಿ ಭೋಪಾಲ ಇಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಂಗೀತ ಸುಧೆಯನ್ನು ಹರಿಸಿರುತ್ತಾರೆ. ಕರ್ನಾಟಕದ ಪ್ರತಿಷ್ಠಿತ ವೇದಿಕೆಗಳಾದ ಆಳ್ವಾಸ್ ನುಡಿಸಿರಿ, ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಗಾಯನದಿಂದ ಎಲ್ಲರ ಹೃದಯ ಗೆದ್ದಿರುತ್ತಾರೆ. ಪ್ರಸ್ತುತ ಪಂಡಿತ ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆ ಗದಗ ಇಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಂ. ವೆಂಕಟೇಶ ಆಲಕೋಡ ಅವರ ಸಂಗೀತ ಸಾಧನೆಗೆ ಪಂಡಿತ ಪಂಚಾಕ್ಷರ ಕೃಪಾಭೂಷಣ, ಪಂ.ಭೀಮಸೇನ ಜೋಶಿ, ಗಾನ ಗಾರುಡಿಗ, ಯುವ ಕಲಾಗುರು ಹಾಗೂ ಗಾನ ಚತುರ ಪ್ರಶಸ್ತಿಗಳು ಲಭಿಸಿವೆ.
ಇವರ ಸಂಗೀತ ಸೇವೆಯನ್ನು ಗುರುತಿಸಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಧಾರವಾಡ ವತಿಯಿಂದ 2023ನೇ ಸಾಲಿನ ‘ರಾಷ್ಟ್ರೀಯ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.