ಕುಂದಾಪುರ: ಡಾ. ಸುಧಾ ಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಸ್ತುತಪಡಿಸುವ ಸರಣಿ ಕಾರ್ಯಕ್ರಮ ‘ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ‘ ದಿನಾಂಕ 18-06-2023ರಂದು ಕುಂದಾಪುರದ ಉಪ್ಪಿನ ಕುದ್ರುವಿನ ಗೊಂಬೆ ಮನೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಸತತ ಏಳು ವರ್ಷಗಳಿಂದ ನಡೆಯುತ್ತಿದ್ದು, ಇದು ಸರಣಿಯ 84ನೇ ಕಾರ್ಯಕ್ರಮ. ಈ ಬಾರಿ ಶ್ರೀಮತಿ ಮಾಯಾ ಕಾಮತ್ ನೇತೃತ್ವದ ಮಹಾಮಾಯಿ ಭಜನಾ ಮಂಡಳಿ ಮಣಿಪಾಲ ಇವರಿಂದ ‘ ಭಕ್ತಿ ಸಂಗೀತ ‘ ಕಾರ್ಯಕ್ರಮವು ನಡೆಯಲಿರುವುದು. ಇದೇ ಸಂದರ್ಭದಲ್ಲಿ 2022-23 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉಪ್ಪಿನ ಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಮಹಿಮಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಉಪ್ಪಿನ ಕುದ್ರು ಗೊಂಬೆಯಾಟ ಅಕಾಡೆಮಿ:
ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದಿರುವ ಉಪ್ಪಿನಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಕೇವಲ ಈ ಪ್ರದೇಶದಲ್ಲಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ಹಾಗೂ ವಿದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿದ ಹೆಗ್ಗಳಿಕೆ ಗಳಿಸಿದ್ದು ಮಾತ್ರವಲ್ಲದೆ ಪರಂಪರೆಯ ಹಾಡುಗಾರಿಕೆ ಮತ್ತು ಅರ್ಥಗಾರಿಕೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಪ್ರಸಕ್ತ ಭಾಸ್ಕರ ಕೊಗ್ಗ ಕಾಮತರು ಇದರ ನಿರ್ದೇಶಕರಾಗಿದ್ದು, ಉಪ್ಪಿನಕುದ್ರುವಿನಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿರುವ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಿ, ಅದನ್ನು ಬೇರೆ ಬೇರೆ ಕಲಾಪ್ರಕಾರಗಳಿಗೂ ಉಚಿತವಾಗಿ ನೀಡುತ್ತಾ ವಿವಿಧ ಕಲಾ ಸಂವರ್ಧನೆಗೆ ಅನುವು ಮಾಡಿಕೊಟ್ಟಿದ್ದಾರೆ.