ಹರೇಕಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಪಾವೂರು-ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19 ಸೆಪ್ಟೆಂಬರ್ 2024ರಂದು ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ‘ಪ್ರತಿಭಾ ಕಾರಂಜಿ, ಚಿಣ್ಣರ ಉತ್ಸವ’ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಇವರು ಮಾತನಾಡಿ “ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಶಿಕ್ಷಣದ ಜೊತೆ ಬೆಳಕಿಗೆ ತರುವ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳಲ್ಲಿ ಅದೆಷ್ಟೋ ಪ್ರತಿಭೆಗಳು ಇರುತ್ತವೆ. ಅವುಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಪ್ರಮುಖವಾದುದು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ಹಿಂಜರಿಕೆ ಬೇಡ” ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಯೋಜನೆ ಸಮಿತಿಯ ಮಂಗಳೂರು ತಾಲೂಕು ಅಧ್ಯಕ್ಷರಾದ ಸುರೇಂದ್ರ ಕಂಬಳಿ ಮಾತನಾಡಿ, “ಧಾರ್ಮಿಕ ಕೇಂದ್ರಗಳಿಗೆ ಆಯಾ ಧರ್ಮೀಯರು ಮಾತ್ರ ಹೋದರೆ ಶಾಲೆಗೆ ಎಲ್ಲಾ ಧರ್ಮೀಯರು ಬರುತ್ತಾರೆ. ಶಿಕ್ಷಕರು ಮಕ್ಕಳಿಗೆ ರಾಜಕೀಯ ರಹಿತವಾಗಿ ಶಿಕ್ಷಣ ನೀಡಿ ದೇಶಕ್ಕೆ ಸುಸಂಸ್ಕೃತ ಪ್ರಜೆಗಳನ್ನು ಅರ್ಪಿಸಬೇಕು” ಎಂದು ಕಿವಿಮಾತು ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹರೇಕಳ ಪಾವೂರು ಶ್ರೀ ರಾಮಕೃಷ್ಣ ಸಂಸ್ಥೆಯ ಸಂಚಾಲಕ ಕಡೆಂಜ ಸೋಮಶೇಖರ ಚೌಟ ಅಧ್ಯಕ್ಷತೆ ವಹಿಸಿದ್ದರು. ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಮಂಗಳೂರು ತಾಲೂಕು ಅಧ್ಯಕ್ಷರಾದ ಕೆ.ಎಂ.ಕೆ. ಮಂಜನಾಡಿ, ಅಲೆಮಾರಿ ಅರೆಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ್ ಶೆಟ್ಟಿ, ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್. ಇನವಳ್ಳಿ, ಕ್ಷೇತ್ರ ಶಿಕ್ಷಣ ಸಂಯೋಜಕ ವಿಶ್ವನಾಥ್, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಜಯರಾಮ ಆಳ್ವ ಪೋಡಾರ್, ಜಗಜೀವನ್ ಶೆಟ್ಟಿ ಕಡೆಂಜ, ಕ್ಷೇತ್ರ ಶಿಕ್ಷಣ ಪ್ರಭಾರ ಸಮನ್ವಯಾಧಿಕಾರಿ ಸುಶ್ಮಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಲೊಲಿಟ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರುಗಳಾದ ಸದಾಶಿವ ಉಳ್ಳಾಲ್, ಸುರೇಂದ್ರ ಕಂಬಳಿ, ಶಂಕರಾನಂದ ಇನವಳ್ಳಿ, ಎಚ್.ಆರ್. ಈಶ್ವರ್, ಶ್ರೀಮತಿ ಅನ್ನಪೂರ್ಣ, ಅರುಣ್ ಗಟ್ಟಿ, ಶ್ರೀಮತಿ ಪ್ರಿಯಾಂಕಾ ಸುರೇಶ್ ಮುಂತಾದವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲಾ ಮುಖ್ಯಶಿಕ್ಷಕಿ ಉಷಾಲತ ಸ್ವಾಗತಿಸಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.