ಬೆಂಗಳೂರಿನ ಖ್ಯಾತ ‘ಸಾಧನ ಸಂಗಮ’ ನೃತ್ಯಸಂಸ್ಥೆ ಎರಡು ದಿನಗಳ ಕಾಲ ನಡೆಸಿದ ‘ಯುಗಳ’ ಮತ್ತು ‘ಬಹುಳ’ ನೃತ್ಯೋತ್ಸವಗಳು ವರ್ಣರಂಜಿತವಾಗಿ ನೆರೆದ ಕಲಾರಸಿಕರ ಮನರಂಜಿಸಿತು. ‘ಯುಗಳ’ದಲ್ಲಿ ಹಲವು ಜೋಡಿ ಕಲಾವಿದೆಯರ ಪ್ರತಿಭಾ ಪ್ರದರ್ಶನ ಕಣ್ತುಂಬಿದರೆ, ‘ಬಹುಳ’ ಕಾರ್ಯಕ್ರಮದಲ್ಲಿ ಶೀರ್ಷಿಕೆಯೇ ಸೂಚಿಸುವಂತೆ ಬಹು ಕಲಾವಿದರ ತಂಡ ಅರ್ಪಿಸುವ ಎರಡು ನೃತ್ಯರೂಪಕಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಸಂಸ್ಥೆ, ಪ್ರತಿವರ್ಷ ತಪ್ಪದೆ ನಡೆಸಿಕೊಂಡು ಬರುತ್ತಿರುವ ನೃತ್ಯೋತ್ಸವಗಳಲ್ಲಿ ‘ಸಾಧನ ಸಂಗಮ’ದ ಆಶ್ರಯದಲ್ಲಿ ನಾಡಿನ ಬಹುತೇಕ ನೃತ್ಯತಂಡಗಳು ಈ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿ, ಜನಮೆಚ್ಚುಗೆ ಗಳಿಸಿವೆ ಅಷ್ಟೇ ಅಲ್ಲದೆ ಇದರಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಗತಿಯೂ ಆಗಿದೆ.
ಇತ್ತೀಚೆಗೆ ಬೆಂಗಳೂರಿನ ‘ರಂಗೋಪನಿಷತ್’ ಸಭಾಂಗಣದಲ್ಲಿ ಸಾಧನ ಸಂಗಮದ ‘ನಾಟ್ಯ ನಿಪುಣ’ ಹಿರಿಯ ಶಿಷ್ಯೆಯರ ತಂಡ ಅಭಿನಯಿಸಿದ ಮಹಾಭಾರತದ ಒಂದು ಪ್ರಮುಖ ಸನ್ನಿವೇಶದ ಸುತ್ತ ಹೆಣೆದ ರಸವತ್ತಾದ ‘ಪ್ರೇಕ್ಷಾಗೃಹ’- ಮನೋಜ್ಞ ನೃತ್ಯರೂಪಕ ಮನರಂಜನೆಯೊಡನೆ ಗಾಢ ಪರಿಣಾಮ ಬೀರಿತು. ದೇವಲೋಕಕ್ಕೆ ಆಗಮಿಸಿದ್ದ ಸುಂದರಾಂಗ ಅರ್ಜುನನನ್ನು ಕಂಡು ಊರ್ವಶಿ, ಅವನಲ್ಲಿ ಮೋಹಗೊಂಡಾಗ, ಅದನ್ನವನು, ನಿರಾಕರಿಸಿ ಅವಳಿಂದ ಶಾಪಗ್ರಸ್ತನಾಗಿ ‘ಬೃಹನ್ನಳೆ’ಯ ರೂಪ ತಳೆಯಬೇಕಾಗಿ ಬಂತು. ಅರ್ಜುನ, ವಿರಾಟರಾಯನ ಅರಮನೆಯಲ್ಲಿ ತಮ್ಮ ಅಜ್ಞಾತವಾಸದಲ್ಲಿ ಆ ಶಾಪವನ್ನು ವರವನ್ನಾಗಿ ಬಳಸಿಕೊಳ್ಳುತ್ತಾನೆ, ಬೃಹನ್ನಳೆಯಾಗಿ ರಾಜಕುಮಾರಿ ಉತ್ತರೆಗೆ ನೃತ್ಯಗುರುವಾಗುತ್ತಾನೆ. ಗುರು ನೃತ್ಯ ಕಲಿಸುವ ಹಾಗೂ ಶಿಷ್ಯೆ ಕಲಿಯುವ ಪರಿ-ವರಸೆಗಳು ಮನರಂಜಕವಾಗಿದ್ದು, ನೃತ್ಯರೂಪಕದ ಮೊದಲಿನಿಂದ ಕಡೆಯವರೆಗೂ ಅಲ್ಲಲ್ಲಿ ಮಿನುಗಿದ ಅಪ್ಸರೆ ಕಲಾವಿದೆಯರ ಭರತನಾಟ್ಯದ ನರ್ತನ ಲಾಸ್ಯ ಕಣ್ಣಿಗೆ ಹಬ್ಬವಾಗಿತ್ತು.
ಅರಮನೆಯಲ್ಲಿ ರಾಣಿ ಸೈರಂಧ್ರಿಯ ಪರಿಚಾರಿಕೆಯಾಗಿದ್ದ ಮಾರುವೇಷದ ದ್ರೌಪದಿ, ರಾಣಿಯ ತಮ್ಮ ಕಾಮುಕ ಕೀಚಕನ ಕಣ್ಣಿಗೆ ಬಿದ್ದು ಹಿಂಸೆ ಅನುಭವಿಸುತ್ತ, ಅವನಿಂದ ಪಾರು ಮಾಡೆಂದು ಬಲಿಷ್ಠ ಭೀಮಸೇನನನ್ನು ಬೇಡಿಕೊಳ್ಳುತ್ತಾಳೆ. ಪ್ರೇಕ್ಷಾಗೃಹದಲ್ಲಿ ಹೆಣ್ಣಿನವೇಷದಲ್ಲಿ ಬಂದ ಭೀಮ ಮತ್ತು ಕಾಮಾತುರನಾಗಿ ದ್ರೌಪದಿಗಾಗಿ ಕಾದಿದ್ದ ಕೀಚಕನ ಭೇಟಿಯ ಸನ್ನಿವೇಶ ಸ್ವಾರಸ್ಯಕರವಾಗಿತ್ತಲ್ಲದೆ, ಹಾಸ್ಯಭರಿತವಾಗಿಯೂ ಇತ್ತು. ಮುಂದೆ ಬೃಹನ್ನಳೆ ಉತ್ತರಕುಮಾರನನ್ನು ಯುದ್ಧಭೂಮಿಗೆ ರಥದಲ್ಲಿ ಕೊಂಡೊಯ್ಯುವ ಸನ್ನಿವೇಶ- ದಾರಿಯುದ್ದಕ್ಕೂ ಉತ್ತರಕುಮಾರನ ಅಂಜಿಕೆಯಿಂದ ನಡುಗುವ, ಹಿಮ್ಮೆಟ್ಟುವ ಹೇಡಿತನದ ಹಾಸ್ಯಾಭಿನಯ, ಅರ್ಜುನ ಅವನಿಗೆ ಧೈರ್ಯ ತುಂಬಲು ಮಾಡುವ ಹರ ಸಾಹಸದ ಪ್ರಯತ್ನಗಳು ನೋಡುಗರಲ್ಲಿ ನಗೆಯುಕ್ಕಿಸಿತು.
ವರ್ಣರಂಜಿತವಾಗಿ, ಕುತೂಹಲವಾಗಿ ಸಾಗಿದ ಕಥೆ, ಕಣ್ಮನ ತುಂಬುವ ನೃತ್ಯಗಳಿಂದ ಸೆಳೆಯಿತು. ಅನೇಕ ನಾಟಕೀಯ ದೃಶ್ಯಗಳಿಂದ ಕೂಡಿದ ನೃತ್ಯರೂಪಕ, ಆಕರ್ಷಕ ವೇಷ ಭೂಷಣಗಳು, ಮನಸೆಳೆದ ನೃತ್ಯಾವಳಿ, ಶ್ರೀವತ್ಸ ಹಾಗೂ ಗುರುಮೂರ್ತಿ ಜೋಡಿಯ ಕಿವಿತುಂಬಿದ ಸಂಗೀತದ ಹಿನ್ನಲೆಯಲ್ಲಿ ಪ್ರತಿಯೊಬ್ಬ ಕಲಾವಿದರ ಭಾವಪೂರ್ಣ ಅಭಿನಯದ ವೈಶಿಷ್ಟ್ಯದಿಂದ ಸ್ವಾರಸ್ಯಕರವಾಗಿ ಸಾಗಿತು. ಹಿರಿಯ ನಾಟ್ಯಗುರು ಕರ್ನಾಟಕ ಕಲಾಶ್ರೀ ಜ್ಯೋತಿ ಪಟ್ಟಾಭಿರಾಮ್ ಅವರ ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ರೂಹುಗೊಂಡ ಈ ದೃಶ್ಯಕಾವ್ಯ ಮನಮೋಹಕವಾಗಿತ್ತು.
ಜೀವನವೊಂದು ಪ್ರೇಕ್ಷಾಗೃಹವಾಗಿ, ನಾನಾ ಪರೀಕ್ಷೆಗಳಿಗೆ ಒಡ್ಡುವ ಈ ಬಾಳಿನ ರಂಗಭೂಮಿಯಲ್ಲಿ ವಹಿಸಬೇಕಾದ ವಿವಿಧ ಪಾತ್ರಗಳ ವಿಶಿಷ್ಟ ಆಯಾಮವನ್ನು ಧ್ವನಿಸಿದ ನೃತ್ಯರೂಪಕ, ಆಧ್ಯಾತ್ಮಿಕ ನೆಲೆಯ ಒಂದು ಅನುಭೂತಿಯನ್ನು ಬಿತ್ತರಿಸಿತು.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.