ಮಡಿಕೇರಿ. ಕನ್ನಡ ನಾಡಿನ ಹಿರಿಯ ಸಾಹಿತಿ ಶಿಶು ಸಾಹಿತ್ಯದ ಪಿತಾಮಹ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೊ” ಕೊಡಗಿನ ನಾಡಗೀತೆಯ ರಚನಾಕಾರ ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ, ಬ್ರಿಟಿಷರ ಕಾಲದಲ್ಲಿ ಕೊಡಗಿನ ಶಾಲಾ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಅಪ್ರತಿಮಾ ಸಂಘಟಕ, ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ದಿನಾಂಕ 06 ಜನವರಿ 2025ರ ಸೋಮವಾರ ಬೆಳಿಗ್ಗೆ ಘಂಟೆ 10.30ಕ್ಕೆ ಮಡಿಕೇರಿಯ ಜೂನಿಯರ್ ಕಾಲೇಜು ಆವರಣದ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಶ್ರೇಷ್ಠ ಶಿಕ್ಷಕರಾದ ಹಿರಿಯ ತಲೆಮಾರಿನ ಹಿರಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣಾ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ನಡೆಸಲು ತಮ್ಮ ಪೂರ್ಣ ಸಹಕಾರ ಬೇಕಾಗಿದೆ. ದಯವಿಟ್ಟು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಗೆ ಆಸಕ್ತ ಕನ್ನಡಾಭಿಮಾನಿಗಳು ಬಂದು ಸೂಕ್ತ ಸಲಹೆಗಳನ್ನು ನೀಡಿ ಸಹಕರಿಸಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಕೋರಿದ್ದಾರೆ.